ಬೆಂಗಳೂರು : ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ (Cult) ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಸಿನಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೀಗ ಸಿಎಂ ಸಿದ್ದರಾಮಯ್ಯ ‘ಕಲ್ಟ್’ ಸಿನಿಮಾ ವೀಕ್ಷಿಸಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಮುಖ್ಯಮಂತ್ರಿಗಳಿಗಾಗಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಚಿತ್ರತಂಡದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ ಸಂಪುಟ ಸಹೋದ್ಯೋಗಿಗಳು, ಆತ್ಮೀಯರು ಆದ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ “ಕಲ್ಟ್ ” ಸಿನಿಮಾವನ್ನು ನಿನ್ನೆ ಸಂಜೆ ಚಿತ್ರಮಂದಿರದಲ್ಲಿ ವೀಕ್ಷಿಸಿದೆ. ಚಿತ್ರದ ಕತೆ, ಸಂಭಾಷಣೆ, ಸಂಗೀತ, ಕಲಾವಿದರ ಅಭಿನಯ ಈ ಎಲ್ಲವೂ ಇಡೀ ಚಿತ್ರವನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಟ್ಟಿದೆ. ಕುಟುಂಬ ಸಮೇತರಾಗಿ ಬಂದು ನೋಡಬಹುದಾದ ಒಂದು ಸಿನಿಮಾ. ಚಿತ್ರತಂಡಕ್ಕೆ ಶುಭವಾಗಲಿ, ಚಿತ್ರ ಯಶಸ್ವಿ ಪ್ರದರ್ಶನ ಕಂಡು ಶತದಿನ ಪೂರೈಸಲಿ ಎಂದು ಹಾರೈಸುತ್ತೇನೆ’ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಿನಿಮಾ ವೀಕ್ಷಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, “ಕಲ್ಟ್ ಸಿನಿಮಾ ಒಂದು ಹೊಸ ಪ್ರಯತ್ನ. ಝೈದ್ ಖಾನ್ ಅವರು ತಮ್ಮ ಪಾತ್ರವನ್ನು ತುಂಬಾ ಸೊಗಸಾಗಿ ನಿರ್ವಹಿಸಿದ್ದಾರೆ” ಎಂದು ಪ್ರಶಂಸಿಸಿದರು. ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಒಳ್ಳೆಯ ಸಿನಿಮಾ ಎಂದು ಸಿಎಂ ತಿಳಿಸಿದ್ದಾರೆ.

