HomeKarnatakaಅದ್ಧೂರಿ ದಸರಾ, ನವರಾತ್ರಿ ಉತ್ಸವ ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಮೆಚ್ಚುಗೆ

ಅದ್ಧೂರಿ ದಸರಾ, ನವರಾತ್ರಿ ಉತ್ಸವ ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಸಿಎಂ ಮೆಚ್ಚುಗೆ

ಅದ್ಧೂರಿಯಾಗಿ ಮತ್ತು ಅಷ್ಟೇ ಅಚ್ಚುಕಟ್ಟಾಗಿ ದಸರಾ ಆಯೋಜಿಸಿ, ಇಡೀ ನವರಾತ್ರಿ ಉತ್ಸವವನ್ನು ಯಶಸ್ವಿಯಾಗಿಸಿದ ಮೈಸೂರು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಅಂಬಾರಿ ಏರಿದ ತಾಯಿ ಚಾಮುಂಡೇಶ್ವರಿಗೆ ಅತಿ ಹೆಚ್ಚು ಬಾರಿ ಮುಖ್ಯಮಂತ್ರಿಯಾಗಿ ಪುಷ್ಪಾರ್ಚನೆ ಅರ್ಪಿಸುವ ಭಾಗ್ಯ ನನ್ನ ಪಾಲಿಗೆ ಒದಗಿ ಬಂದಿರುವುದು ಸಂತಸದ ಜೊತೆಗೆ ಧನ್ಯತಾಭಾವವನ್ನು ಮೂಡಿಸಿದೆ.

ಕಳೆದ ವರ್ಷ ಭೀಕರ ಬರಗಾಲದ ಕಾರಣದಿಂದ ಸಂಪ್ರದಾಯ ಮತ್ತು ವೈಭವಕ್ಕೆ ಕೊರತೆ ಇಲ್ಲದ ಸರಳ ದಸರಾವನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ, ನಿರೀಕ್ಷೆಗಿಂತ ಉತ್ತಮ ಬೆಳೆ ಆಗುವ ಲಕ್ಷಣಗಳೂ ಸ್ಪಷ್ಟವಾಗಿವೆ. ಸಾಲದ್ದಕ್ಕೆ ಈ ಬಾರಿ ಜಿಎಸ್‌ಟಿ ಮತ್ತು ತೆರಿಗೆ ಸಂಗ್ರಹವೂ ನಿರಾಸೆ ಮೂಡಿಸಿಲ್ಲ. ಇದು ರಾಜ್ಯದ ಆರ್ಥಿಕತೆ ಆರೋಗ್ಯಕರವಾಗಿ ಏರುಗತಿಯಲ್ಲಿ ಇರುವುದಕ್ಕೆ ಸಾಕ್ಷಿಯಾಗಿದೆ. ಎಲ್ಲವೂ ಒಟ್ಟಾಗಿ ದಸರಾ ಸಂಭ್ರಮವನ್ನು ಹೆಚ್ಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಸರಾ ಪೂರ್ವಭಾವಿ ಸಭೆಗಳಲ್ಲಿ ಕೊಟ್ಟ ಸೂಚನೆ ಮತ್ತು ತೆಗೆದುಕೊಂಡ ನಿರ್ಣಯಗಳನ್ನು ಜಿಲ್ಲಾಡಳಿತ ಶಿಸ್ತುಬದ್ದವಾಗಿ ಜಾರಿಗೊಳಿಸಿದೆ. ಇದೇ ಮೊದಲ ಬಾರಿಗೆ ಯುವ ದಸರಾವನ್ನು ಚಾಮುಂಡಿ ತಪ್ಪಲಿನ ಉತ್ತನಹಳ್ಳಿಯಲ್ಲಿ ಸಂಘಟಿಸಿ ಲಕ್ಷ ಲಕ್ಷ ಮಂದಿ ಸಂಭ್ರಮಿಸಿದರು. ಶಾಸ್ತ್ರೀಯ ಸಂಗೀತ ಪ್ರಕಾರಗಳಿಂದ, ಸಮಕಾಲೀನ ಸಂಗೀತವನ್ನೂ, ಶಾಸ್ತ್ರೀಯ ನೃತ್ಯದಿಂದ ಸಮಕಾಲೀನ ನೃತ್ಯ ಪ್ರಕಾರಗಳು, 20 ಕ್ಕೂ ಹೆಚ್ಚು ತಂಡಗಳು, ನೂರಾರು ಕಲಾವಿದರು ಯುವ ದಸರಾ ಸಡಗರವನ್ನು ಹೆಚ್ಚಿಸಿದ್ದಾರೆ.

ಹಾಗೆಯೇ ದಸರಾದ ಮುಖ್ಯ ಸಾಂಸ್ಕೃತಿಕ ವೇದಿಕೆಯಲ್ಲೂ ಸಾಹಿತ್ಯ, ಸಂಗೀತ, ಕಲೆ, ನೃತ್ಯಗಳು ಮೇಳೈಸಿ ಖುಷಿ ಕೊಟ್ಟಿದೆ.

ಒಟ್ಟಾರೆಯಾಗಿ ದಸರಾ ಉದ್ಘಾಟನೆಯಿಂದ ಅಂಬಾರಿಯಲ್ಲಿ ಕೂತ ದೇವಿಗೆ ಪುಷ್ಪಾರ್ಚನೆವರೆಗೂ ಯಾವುದೇ ಅಡಚಣೆಗಳು ಇಲ್ಲದಂತೆ ಒಂಬತ್ತು ದಿನಗಳ ಕಲಾ ಸಾಂಪ್ರದಾಯಿಕ ದಸರಾ ಸಂಭ್ರಮದಿಂದ ಮುಗಿದಿದೆ.

ಪಂಜಿನ ಮೆರವಣಿಗೆ ಕೂಡ ಹಳತು ಮತ್ತು ಆಧುನಿಕತೆಯ ಮಿಶ್ರಣವಾಗಿದ್ದು ಈ ಬಾರಿಯ ವಿಶೇಷ.‌ ಅತ್ಯಂತ ಪುರಾತನವಾದ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ರಚಿಸಿದ ಅತ್ಯಂತ ಆಧುನಿಕವಾದ 1500 ಡ್ರೋನ್ ಗಳ ಬೆಳಕಿನ ರಂಗೋಲಿ ನೆರೆದಿದ್ದವರನ್ನು ವಿಸ್ಮಯದ ಜೊತೆಗೆ ರಂಜಿಸಿತು.

ದಸರಾ ಹೊತ್ತಲ್ಲಿ ಕಾನೂನು ಸುವ್ಯವಸ್ಥೆಗೆ ಎಲ್ಲೂ ಧಕ್ಕೆ ಆಗದಂತೆ, ಸಂಚಾರ ನಿರ್ವಹಣೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ತೋರಿಸಿದ ಸಂಯಮ, ಶ್ರಮ ಫಲ ನೀಡಿದೆ. ಅನಿವಾರ್ಯ ಕಾರಣಗಳಿಂದ, ಏಕಾಏಕಿ ಮೈಸೂರಿಗೆ ರಾಜ್ಯದ ಮೂಲೆ ಮೂಲೆಗಳಿಂದ, ಅಕ್ಕ‌ಪಕ್ಕದ ರಾಜ್ಯಗಳಿಂದ ಬಂದಿಳಿದ ವಾಹನಗಳ ಪ್ರವಾಹ ನಿಭಾಯಿಸಲು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕಾಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಕಿರಿ ಕಿರಿ ಆಗಿದ್ದರೂ ಒಟ್ಟಾರೆಯಾಗಿ ಜಿಲ್ಲಾ ಪೊಲೀಸ್ ಮತ್ತು ನಗರ ಪೊಲೀಸ್ ಕಮಿಷನರೇಟ್ ನ ಶ್ರಮ ಮತ್ತು ವೃತ್ತಿಪರತೆಯನ್ನು ನಾವು ಮೆಚ್ಚಲೇಬೇಕು.

ಹಾಗೆಯೇ ಶುಕ್ರವಾರ ಸಂಜೆ ಅಂಬಾರಿ ಬಸ್ ನಲ್ಲಿ ನಗರ ಪ್ರದಕ್ಷಿಣೆ ಹೊರಟು ದೀಪಾಲಂಕಾರ ವೀಕ್ಷಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನ ಅನ್ನಿಸಿತು.‌ ಮತ್ತೊಬ್ಬರ ಸಂತೋಷಕ್ಕೆ ಘಾಸಿ ಮಾಡುವ ಹುಡುಗಾಟದ ತುತ್ತೂರಿಯನ್ನು, ಪೀಪಿಯನ್ನು ಈ ಬಾರಿ ಪೊಲೀಸರು ನಿಷೇಧಿಸಿದ್ದು ಒಳ್ಳೆಯದಾಯಿತು ಎನ್ನುವ ಅಭಿಪ್ರಾಯಗಳನ್ನೂ ನಗರ ಪ್ರದಕ್ಷಿಣೆ ವೇಳೆ ಹಲವರು ವ್ಯಕ್ತಪಡಿಸಿದರು.

ರಾಜ್ಯದ, ಹೊರ ರಾಜ್ಯದ, ವಿದೇಶಿಯರಿಗೆ ಅಚ್ಚುಕಟ್ಟಾದ ವಸತಿ, ಆತಿಥ್ಯ ನೀಡಿ ಮೈಸೂರಿನ, ರಾಜ್ಯದ ಘನತೆ ಹೆಚ್ಚಿಸಿದ ಹೋಟೆಲ್ ಉದ್ಯಮ ಮತ್ತು ಊಟೋಪಚಾರ, ಸಂಜೆಯ ಕುರುಕಲು ತಿಂಡಿಯವರೆಲ್ಲಾ ದಸರಾದ ಸಂಭ್ರಮ ಹೆಚ್ಚಿಸಿದ್ದಾರೆ.

ದಸರಾದ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೆಚ್ಚಿಸುವ, ಸಾಂಪ್ರದಾಯಿಕ ಹಿರಿಮೆಯನ್ನು ವಿಸ್ತರಿಸಿದ ಜಿಲ್ಲಾಡಳಿತದ ಶ್ರಮ ಮೆಚ್ಚತಕ್ಕದ್ದು.‌

ಈ ಎಲ್ಲಾ ಸಾರ್ಥಕತೆಗೆ ಕಾರಣವಾದ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆಗೆ ಸಾರ್ಥಕತೆ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular