HomeKarnatakaನಾಯಕತ್ವ ಬದಲಾವಣೆ ಚರ್ಚೆ, ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸುವ ವಿಶ್ವಾಸ!

ನಾಯಕತ್ವ ಬದಲಾವಣೆ ಚರ್ಚೆ, ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸುವ ವಿಶ್ವಾಸ!

ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಸಾಧನೆ ಮಾಡಿದ್ದಾರೆ. 7 ವರ್ಷ 240 ದಿನಗಳ ಕಾಲ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕದ ಸುಧೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದಾರೆ.

“ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಅವರು, “ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಮುರಿಯಲೆಂದು ನಾನು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ. ಮುಖ್ಯಮಂತ್ರಿಯಾಗಿ ಈ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸವಿದೆ. ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕಷ್ಟೆ” ಎಂದು ಎಲ್ಲವನ್ನೂ ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ.

“ನನ್ನ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿದ ಸುದ್ದಿ ಗಮನಿಸಿದೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ. ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ. ಜನರ ಕೆಲಸ ಮಾಡುವುದು ಖುಷಿಯ ಸಂಗತಿ” ಎಂದರು.

“ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಮಾಡಿಕೊಡುವುದು. ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು” ಎಂದು ತಿಳಿಸಿದರು.

“ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ ಆಗಿದ್ದು, ಇಬ್ಬರೂ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿದ್ದೇವೆ. ಆದರೆ ಕಾಲಘಟ್ಟ ಬೇರೆ ಬೇರೆಯಾಗಿದೆ. 1972ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಅವಧಿಗೆ ಆಗಿದ್ದೇನೆ” ಎಂದು ಹೇಳಿದರು.

“ತಾಲ್ಲೂಕು ಬೋರ್ಡ್ ಸದಸ್ಯನಾದ ನಂತರದ ನನ್ನ ರಾಜಕೀಯ ಜೀವನದಲ್ಲಿ ಸಚಿವನಾಗುವ ಮತ್ತು ಮುಖ್ಯಮಂತ್ರಿಯಾಗುವ ನಿರೀಕ್ಷೆಯಿರಲಿಲ್ಲ. 13 ಚುನಾವಣೆಗಳನ್ನೂ ಎದುರಿಸಿ 9 ಬಾರಿ ಗೆಲುವು ಸಾಧಿಸಿದ್ದೇನೆ” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

“ಕಡಿಮೆ ಜನಸಂಖ್ಯೆಯ ಅರಸು ಸಮುದಾಯದವರಾಗಿದ್ದ ದೇವರಾಜ ಅರಸು ಅವರು ಜನಪ್ರಿಯ ನಾಯಕರಾಗಿದ್ದರು. ಅಂತಹ ಮಹಾನ್ ನಾಯಕನಿಗೂ ಮತ್ತು ನನಗೂ ಹೋಲಿಕೆ ಸರಿಯಲ್ಲ. ಅರಸು ಅವರ ಅವಧಿಯಲ್ಲಿ ರಾಜ್ಯದ ಪರಿಸ್ಥಿತಿ ವಿಭಿನ್ನವಾಗಿತ್ತು. ಅವರು ಒಂದು ಬಾರಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು” ಎಂದರು.

“ದಾಖಲೆಗಳು ಮುರಿಯಲೆಂದೇ ನಿರ್ಮಾಣವಾಗುತ್ತವೆ. ಪ್ರಸ್ತುತ ನಾನು ಪೂರೈಸಲಿರುವ ಅವಧಿಯನ್ನು ಮೀರಲಿರುವ ಮತ್ತೊಬ್ಬ ನಾಯಕರೂ ಮುಂದೆ ಬರಬಹುದು. ನನಗಿಂತ ಹೆಚ್ಚಿನ ಬಾರಿ ಬಜೆಟ್ ಮಂಡಿಸುವ ನಾಯಕರೂ ಮುಂದೆ ಬರಬಹುದು” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅಧಿಕಾರಾವಧಿ ಇನ್ನೂ ಎರಡೂವರೆ ವರ್ಷವಿದೆ. ನಾಯಕತ್ವ ಬದಲಾವಣೆ ಆಗದೆ 5 ವರ್ಷಗಳನ್ನು ಸಿದ್ದರಾಮಯ್ಯ ಪೂರೈಸಿದರೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular