ಚಿತ್ರದುರ್ಗ : ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 11 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.
ಡಿವೈಡರ್ ದಾಟಿ ಬಂದ ಲಾರಿ ಸೀಬರ್ಡ್ ಖಾಸಗಿ ಸ್ಲೀಪರ್ ಕೋಚ್ ಬಸ್ ಗೆ ಡಿಕ್ಕಿ ಹೊಡೆದಿದ್ದು, 11 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘’ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ’’.ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಡಿಸಿಎಂ ಡಿಕೆಶಿ ಟ್ವೀಟ್
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಡಿಸಿಎಂ ಡಿಕೆಶಿ ಟ್ವೀಟ್ ಮಾಡಿದ್ದಾರೆ.

