HomeKarnatakaರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಜೋರಾಗಿದೆ: ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಸಿಎಂ ಸಿದ್ಧರಾಮಯ್ಯ

ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಜೋರಾಗಿದೆ: ಕನಿಷ್ಠ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಸಿಎಂ ಸಿದ್ಧರಾಮಯ್ಯ

ಮೈಸೂರು: ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ. ಇವೆರಡನ್ನೂ ಸೇರಿಸಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೂರು ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ ‘ಕೈ’ಗೆ ಬರಲೇಬೇಕು, ಬರುತ್ತವೆ. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನೆಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರ ಯಾವ ಕಾರಣಗಳೂ ಇಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಬಿಜೆಪಿ ವಿರೋಧಿಯಾದ ಅಲೆ ಜೋರಾಗಿದೆ. ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲಾ ಕುಟುಂಬಗಳಿಗೆ ಕಾಂಗ್ರೆಸ್ ಗ್ಯಾರಂಟಿಗಳು ನೆಮ್ಮದಿ ತರಿಸಿರುವುದನ್ನು ನಾಡಿನ ಜನತೆ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ನಾವು ನಡೆಸಿರುವ ಹಲವು‌ ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲುವುದೂ ಸೇರಿ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎನ್ಮುವ ವರದಿಗಳು ಬಂದಿವೆ. ಹೀಗಾಗಿ‌ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರವಾದ ಅಭೂತಪೂರ್ವ ಫಲಿತಾಂಶ ಹೊರಗೆ ಬರಲಿದೆ ಎಂದರು.

ಹತ್ತು ವರ್ಷ ಅಧಿಕಾರ ಮಾಡಿದ ಪ್ರಧಾನಿ ಮೋದಿ ಸರ್ಕಾರಕ್ಕೆ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಹೀಗಾಗಿ ಶ್ರೀರಾಮನ ಹೆಸರಲ್ಲಿ ಮತ ಕೇಳುವಂತಾಗಿದೆ. ರಾಮ ಸರ್ವರಿಗೂ ಸೇರಿದವನು. ನನ್ನ ಹೆಸರಲ್ಲೇ ರಾಮ ಇದ್ದಾನೆ.‌ ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಏಕೆಂದರೆ ಈ ಹತ್ತು ವರ್ಷಗಳಲ್ಲಿ ಬಿಜೆಪಿ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಅದಕ್ಕೇ ಕೇವಲ ಮೋದಿಯವರ ಮುಖ ತೋರಿಸಿ ಚುನಾವಣೆ ಮಾಡ್ತೀವಿ ಎಂದು ಬಿಜೆಪಿ ಹೆಣಗಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ 50-60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ ಎಂದರು

ಈ ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಬಿಜೆಪಿ ಜೊತೆ ಸೇರಿದ್ದಾರೆ. ತಮ್ಮ ಅಳಿಯ ಮಂಜುನಾಥ್ ಅವರನ್ನು ಬಿಜೆಪಿಗೆ ಕಳಿಸಿದ್ದಾರೆ. ಮೊದಲು ನೀನು ಹೋಗಿರು, ಆಮೇಲೆ ನಾವೂ ಬರ್ತೀವಿ ಎನ್ನುವ ರೀತಿ ಅಳಿಯನನ್ನು ಬಿಜೆಪಿಗೆ ಕಳಿಸಿದ್ದಾರೆ. ಅದಕ್ಕೇ ತಮ್ಮ ಪಕ್ಷದ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯಕ್ಕೆ ಬರಗಾಲ ಬಂದು ಐದು ತಿಂಗಳಾದರೂ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರ ಒಂದೇ ಒಂದು ರೂಪಾಯಿ ಬಂದಿಲ್ಲ. ರಾಜ್ಯದ ಜನರಿಗೆ ಉಚಿತವಾಗಿ ಅಕ್ಕಿ ಕೊಡ್ತೀವಿ. ದುಡ್ಡು ತಗೊಂಡು ನಮಗೆ ಅಕ್ಕಿ ಕೊಡಿ ಅಂದರೂ ಕೇಂದ್ರ ಬಿಜೆಪಿ ಸರ್ಕಾರ ಕೊಡಲಿಲ್ಲ. ಈಗ ರಾಜ್ಯದ ಪಾಲಿನ ಬರ ಪರಿಹಾರ ನಮಗೆ ಕೊಡಿ ಎಂದರೂ ಕೊಡುತ್ತಿಲ್ಲ. ನಮ್ಮ ತೆರಿಗೆ ಹಣಕ್ಕೆ ಬೆಲೆ ಇಲ್ಲವಾ? ನಮ್ಮ ರಾಜ್ಯದ ಜನರ ಬೇಡಿಕೆಗೆ ಬೆಲೆ ಇಲ್ಲವಾ? ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular