ಬೆಂಗಳೂರು: ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯುದ್ಧ ಅನಿವಾರ್ಯವಾದರೆ ಮಾತ್ರ ಯುದ್ಧ ಮಾಡಬೇಕು ಎಂದು ಹೇಳಿದ್ದಾರೆ.
ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧವೇ ಬೇಡವೇ ಬೇಡ ಎಂದು ನಾನು ಹೇಳಿಲ್ಲ. ಯುದ್ಧವೇ ಪರಿಹಾರವಲ್ಲ, ಭದ್ರತೆ ಕೊಡಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಹಿಂದೆ 40 ಸೈನಿಕರು ಮೃತಪಟ್ಟಿದ್ದರು. ಈಗ 27 ಜನ ಸಾವನ್ನಪ್ಪಿದ್ದಾರೆ. ಯುದ್ಧ ಅನಿವಾರ್ಯವಾದರೆ ಮಾತ್ರ ಮಾಡಬೇಕು. ತಕ್ಷಣಕ್ಕೆ ಯುದ್ಧ ಬೇಡ ಎಂದು ಹೇಳಿದ್ದೇನೆ. ಬಿಜೆಪಿಯವರು ಉತ್ತರ ಕೊಡುವುದೇ ಸರಿಯಲ್ಲ ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಲಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕನ್ನಡಿಗರು ಸೇರಿ 28 ಪ್ರವಾಸಿಗರು ಬಲಿಯಾಗಿದ್ದು, ಈ ಘಟನೆ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪಾಕಿಸ್ತಾನ ಮಾಧ್ಯಮಗಳಲ್ಲಿಯೂ ಸಿದ್ದರಾಮಯ್ಯ ಸುದ್ದಿಯಾಗಿದ್ದರು.
ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ. ಸಿದರಾಮಯ್ಯನವರ ಈ ಹೇಳಿಕೆಯನ್ನು ಪಾಕಿಸ್ತಾನದ ಮೀಡಿಯಾಗಳು ಪ್ರಸಾರ ಮಾಡುತ್ತಿವೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿಕೆ ಪಾಕಿಸ್ತಾನ ಸುದ್ದಿ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿದ್ದು, ವಿಪಕ್ಷ ಬಿಜೆಪಿ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕೆಂಡಾಮಂಡಲವಾಗಿದೆ. ಸಿದ್ದರಾಮಯ್ಯನವರು ಎರಡು ಬಾರಿ ಸಿಎಂ ಆದರೂ ಯಾವಾಗ ಏನು ಮಾತನಡಬೇಕೆಂದು ಪರಿಜ್ಞಾನವಿಲ್ಲ. ಪಾಕ್ ಉಗ್ರರ ದಾಳಿಗೆ ಕನ್ನಡಿಗರು ಸೇರಿ 28 ಜನರು ಬಲಿಯಾದರೂ ಪಾಕಿಸ್ತಾನದ ಜೊತೆ ಯುದ್ದಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದೆ.