ಚಿತ್ರದುರ್ಗ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಪ್ರವಾಸಿ ಬಸ್ವೊಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಐಮಂಗಲ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ರಸ್ತೆ ಬದಿಯ ಟ್ರೆಂಚ್ಗೆ ಬಿದ್ದ ಪರಿಣಾಮ ಬಸ್ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದ ರಭಸಕ್ಕೆ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ 20 ಮಂದಿಯನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ನಲ್ಲಿ ಒಟ್ಟು 53 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಐಮಂಗಲ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಬಸ್ನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

