ಚಿತ್ರದುರ್ಗ: ದಲಿತ ಯುವಕನೊಬ್ಬನನ್ನು ಅಪಹರಿಸಿದ ಚಿತ್ರದುರ್ಗದ ಇಬ್ಬರು ತೃತೀಯ ಲಿಂಗಿಗಳು ಶಸ್ತ್ರ ಚಿಕಿತ್ಸೆ ಮೂಲಕ ಯುವಕನ ಲಿಂಗ ಪರಿವರ್ತನೆ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿಯ 22 ವರ್ಷದ ಸಂತ್ರಸ್ತನ ತಂದೆ ನೀಡಿದ ದೂರಿನ ಅನ್ವಯ ಅನುಷ್ಕಮ್ಮ ಮತ್ತು ನಳಿನಮ್ಮ ಎಂಬುವವರ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಚಿತ್ರದುರ್ಗದ ತನ್ನ ದೊಡ್ಡಮ್ಮನ ಮನೆಯಲ್ಲಿದ್ದ ಯುವಕ ಹೂವಿನ ವ್ಯಾಪಾರ ಮಾಡಿಕೊಂಡಿದ್ದ. ಈ ವೇಳೆ ತೃತೀಯ ಲಿಂಗಿಗಳಾದ ಅನುಷ್ಕಮ್ಮ ಪರಿಚಯವಾಗಿದ್ದು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅವರ ಮನೆಗೆ ಹೂವು ಕೊಡಲು ಯುವಕ ಹೋಗುತ್ತಿದ್ದ. ಆಗ ಆತನನ್ನು ಬಲವಂತವಾಗಿ ಕೂಡಿಹಾಕಿ ಹೆಂಗಸರ ಡ್ರೆಸ್ ಹಾಕಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಸೆಪ್ಟೆಂಬರ್ 1 ರಂದು ಎಂದಿನಂತೆ ಯುವಕ ಹೂವು ಕೊಡಲು ಅವರ ಮನೆಗೆ ಹೋಗಿದ್ದ ವೇಳೆ ಅನುಷ್ಕಮ್ಮ ಮತ್ತು ನಳಿನಮ್ಮ ಮುಖಕ್ಕೆ ವೇಲ್ ಕಟ್ಟಿ ಅಪಹರಿಸಿದ್ದಾರೆ. ದಾವಣಗೆರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಲಿಂಗ ಪರಿವರ್ತನೆ ಆಪರೇಷನ್ ಮಾಡಿಸಿದ್ದಾರೆ. ಅಲ್ಲಿಂದ ಕರೆದುಕೊಂಡು ಬಂದು ಚಿತ್ರದುರ್ಗದ ತಮ್ಮ ಮನೆಯಲ್ಲಿ ಒಂದು ವಾರ ಕೂಡಿ ಹಾಕಿದ್ದಾರೆ. ಸೆಪ್ಟೆಂಬರ್ 11ರಂದು ಮಂಗಳಮುಖಿಯರ ಸಂಪ್ರದಾಯದಂತೆ ಮಾತಾ ಪೂಜೆ ನಡೆಸಿದ್ದಾರೆ. ಯುವಕನಿಗೆ ಆಪರೇಷನ್ ಮಾಡಿದ ಜಾಗಕ್ಕೆ ಬಿಸಿಯಾದ ಕೆಂಡದಿಂದ ಸುಟ್ಟಿದ್ದಾರೆ. ಇದರಿಂದ ಸುಟ್ಟ ಗಾಯಗಳಾಗಿವೆ ಎಂದು ಯುವಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಂಗಳಮುಖಿಯರ ಮಾತಾ ಪೂಜೆಯ ನಂತರ ಸೆಪ್ಟೆಂಬರ್ 29ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗೇಟ್ ಬಳಿಗೆ ಕರೆದುಕೊಂಡು ಹೋಗಿದ್ದು, ಇನ್ನು ಮುಂದೆ ಇಲ್ಲೇ ಭಿಕ್ಷೆ ಬೇಡು ಎಂದು ಬಿಟ್ಟು ಹೋಗಿದ್ದಾರೆ. ಅಕ್ಟೋಬರ್ 2ರಂದು ತನ್ನ ತಾಯಿ ಶಿವಮ್ಮ ಅವರಿಗೆ ಕರೆ ಮಾಡಿದ ಯುವಕ ನಡೆದ ಸಂಗತಿಯನ್ನು ತಿಳಿಸಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ತೆಕ್ಕಲಕೋಟೆ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಲ್ಲಿ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ
ಬಳ್ಳಾರಿ: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ವಾರ್ಡ್ನಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ವಿದ್ಯುತ್ ಕಡಿತಗೊಂಡಾಗ ಮೊಬೈಲ್ ಟಾರ್ಚ್ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ವರದಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿರುಗುಪ್ಪ ತಾಲೂಕು ಆರೋಗ್ಯಾಧಿಕಾರಿಗಳು ವರದಿ ಸಲ್ಲಿಸಿದ್ದು, ಅಕ್ಟೋಬರ್ 6ರಂದು ಪಿ.ಎನ್.ಸಿ ವಿಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಸಿ.ಸಿ.ಟಿ.ವಿ ಪರಿಶೀಲಿಸಿದಾಗ, ದಾಖಲಾಗಿದ್ದ ರೋಗಿಯೊಬ್ಬರ ಸಂಬಂಧಿಕರು ಬ್ಯಾಟರಿ ಸ್ವಿಚ್ ಆಫ್ ಮಾಡಿದ್ದರಿಂದ ಬ್ಯಾಟರಿ ಚಾರ್ಜ್ ಆಗದೆ ಈ ತಾತ್ಕಾಲಿಕ ವ್ಯತ್ಯಯ ಉಂಟಾಗಿರುವುದು ಬೆಳಕಿಗೆ ಬಂದಿದೆ. ಆ ಸಂದರ್ಭದಲ್ಲಿ ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಸ್ಪತ್ರೆಯಲ್ಲಿ ತುರ್ತು ವಿದ್ಯುತ್ ಪೂರೈಕೆಗಾಗಿ ಈಗಾಗಲೇ 7 ಯು.ಪಿ.ಎಸ್ ಬ್ಯಾಟರಿಗಳು ಹಾಗೂ 62.5 ಕೆವಿ ಜನರೇಟರ್ ವ್ಯವಸ್ಥೆ ಲಭ್ಯವಿದೆ. ಬ್ಯಾಟರಿಗಳು, ಡಿಸ್ಟಿಲ್ಡ್ ವಾಟರ್ ಮತ್ತು ಜನರೇಟರ್ ನಿರ್ವಹಣೆ ಕುರಿತು ನಿಗಾ ವಹಿಸಲು ಆಡಳಿತ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜತೆಗೆ ಸಾರ್ವಜನಿಕರು ಅಥವಾ ರೋಗಿಗಳ ಸಂಬಂಧಿಕರು ಸ್ವಿಚ್ಗಳನ್ನು ಮುಟ್ಟದಂತೆ ಎಚ್ಚರಿಕೆ ಫಲಕ ಅಳವಡಿಸಲು ನಿರ್ದೇಶಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ, ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಜನರೇಟರ್ ವ್ಯವಸ್ಥೆ ಸುಸ್ಥಿತಿಯಲ್ಲಿದ್ದು ರೋಗಿಗಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದ್ದಾರೆ.

