ಬೆಂಗಳೂರು: 5 ಲಕ್ಷ ರೂಪಾಯಿಗೆ ಪತ್ನಿ ಮಗುವನ್ನೇ ಮಾಅರಾಟ ಮಾಡಿದ್ದಾಳೆಂದು ಪತಿ ಮಹಾಶಯನೊಬ್ಬ ದೂರು ನೀಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ವ್ಯಕ್ತಿಯ ಮುಖವಾಡ ಬಯಲಾಗಿದೆ.
ಪತ್ನಿ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂದು ಆರೋಪಿಸಿ ರವಿಬಾಅಬು ಎಂಬಾತ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ದೂರು ನೀಡಿದ ವ್ಯಕ್ತಿಯ ಸುಳ್ಳಾಟ ಬಹಿರಂಗವಾಗಿದೆ.
ರವಿಬಾಬು ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಮಹಿಳೆ ಮತ್ತು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ, ಪತ್ನಿ ಮಗುವನ್ನು ಮಾರಾಟ ಮಾಡಿಲ್ಲ, ಬದಲಾಗಿ ಪತಿಯ ನಿರಂತರ ಕಿರುಕುಳ, ದೈಹಿಕ ಮತ್ತು ಮಾನಸಿಕ ಹಿಂಸೆ, ಅಕ್ರಮ ಸಂಬಂಧಕ್ಕೆ ಮನನೊಂದು ಮಕ್ಕಳೊಂದಿಗೆ ಮನೆ ಬಿಟ್ಟಿರುವುದು ತಿಳಿದುಬಂದಿದೆ.
ಮದುವೆಯಾಗಿ 16 ವರ್ಷಗಳು ಕಳೆದು, ಮಕ್ಕಳಿದ್ದರೂ ರವಿಬಾಬು ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಎರೆಡೆರಡು ಮೊಬೈಲ್‌ಗಳನ್ನು ಬಳಸಿ ಪತ್ನಿಗೆ ವಂಚಿಸುತ್ತಿದ್ದನಂತೆ. ಪತಿಯ ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ತನ್ನ ತವರು ಮನೆಯಲ್ಲೂ ಜಗಳವಾಗಿದ್ದರಿಂದ ಯಾರ ಸಹಾಯವೂ ಇಲ್ಲದೆ ಸಂಕಷ್ಟಕ್ಕಿದಾಗಿದ್ದೆ. ಮಕ್ಕಳೊಂದಿಗೆ ಸುರಕ್ಷಿತವಾಗಿರಲು ನಿರ್ಧರಿಸಿ ಮನೆ ಬಿಟ್ಟು ಹೋಗಿದ್ದಾಗಿ ಮಹಿಳೆ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸರು ತಾಯಿ ಮತ್ತು ಮೂವರು ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ರಕ್ಷಣೆ ನೀಡಿದ್ದಾರೆ. ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದ ಪತಿ ರವಿಬಾಬುನನ್ನು ಪೊಲಿಸರು ವಶಕ್ಕೆ ಪದೆದಿದ್ದಾರೆ.

