ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಹಿಂದೂ ಕಾರ್ಯಕರ್ತರು, ಮುಸ್ಲಿಂ ಸಂಘಟನೆ ಸದಸ್ಯರು ಸೇರಿದಂತೆ 15 ಜನರಿಗೆ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರುಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ , ಬಜರಂಗದಳ ಹಾಸನ ವಿಭಾಗದ ಸಹ ಸಂಯೋಜಕ ಶ್ಯಾಮ್ ವಿ ಗೌಡ, ಮುಸ್ಲಿಂ ಸಂಘಟನೆಯ ನಾಲ್ವರು ಸೇರಿದಂತೆ 15 ಜನರಿಗೆ ಪೊಲೀಸ್ ಕಾಯ್ದೆ 1963 ಕಲಂ 58ರ ಅಡಿಯಲ್ಲಿ ಜಿಲ್ಲಾಡಳಿತದಿಂದ ಗಡಿಪಾರು ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ತನ್ನ ಶಿಫಾರಸ್ಸು ಪತ್ರದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇವರನ್ನು ಜಿಲ್ಲೆಯಿಂದ ಹೊರಹಾಕುವಂತೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅದರಂತೆ ನೋಟಿಸ್ ನೀಡಲಾಗಿದೆ.
ಮುಸ್ಲಿಂ ಸಮುದಾಯದ 10 ಜನ ಹಾಗೂ ಹಿಂದೂ ಧರ್ಮದ 05 ಒಟ್ಟು 15 ಜನರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಇಲಾಖೆ ನೀಡಿರುವ ಪಟ್ಟಿಯಲ್ಲಿ ಪ್ರಮುಖವಾಗಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಭಜರಂಗದಳದ ಹಾಸನ ವಿಭಾಗದ ಸಂಯೋಜಕ ಶ್ಯಾಮ್ ವಿ ಗೌಡ ಅವರ ಹೆಸರುಗಳಿವೆ. ನೂರ್ ಅಹಮದ್, ಫಾರೂಕ್,ಇಬ್ರಾಹಿಂ ಅಲಿಯಾಸ್ ಇಬ್ಬು, ಇಮ್ರಾನ್,ಚಾಂದ್ ಪಾಷಾ, ಜೋಹಾರ್ ಅಂಜುಮ್, ಮೊಹಮ್ಮದ್ ಇದ್ರಿಶ್, ಫಾಜಿಲ್ ಅಹಮದ್, ಜಾವೀದ್ ಖುರೇಶಿ, ಮೊಹಮ್ಮದ್ ಫಾಜಿಲ್, ಮೂಡಿಗೆರೆ ಕೌಶಿಕ್ ಸೇರಿದಂತೆ 15 ಜನರಿಗೆ ಗಡಿಪಾರು ನೋಟಿಸ್ ನೀಡಲಾಗಿದೆ.

