ಚಿಕ್ಕಬಳ್ಳಾಪುರ: ದಿನಕಳೆದಂತೆ ಸುತ್ತಮುತ್ತಲಿನ ಪರಿಸರ, ವಾತಾವರಣ ಅದೆಷ್ಟು ಕಲುಷಿತವಾಗುತ್ತಿದೆಯೆಂದರೆ ಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಎಲ್ಲವೂ ವಿಷಯುಕ್ತವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ತರಕಾರಿಗಳಲಿಯೂ ಅಧಿಕ ಸೀಸ ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಈಗ ಜೀವಜಲ ಕೂಡ ವಿಷವಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಅಧಿಕ ಫ್ಲೋರೈಡ್, ನೈಟ್ರೇಟ್ ಅಂಶಗಳು ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಎಂದು ಘೋಷಿಸಲಾಗಿದೆ. ಜಿಲ್ಲೆಯ 1,274 ಹಳ್ಳಿಗಳ ಪೈಕಿ ನೂರಾರು ಗ್ರಾಮಗಳಲ್ಲಿ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬುದು ನೀರಿನ ಗುಣಮಟ್ಟ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ.
ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ಲೋರೈಡ್ ಮತ್ತು ನೈಟ್ರೇಟ್ ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ಮಹೇಶಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಅಶುದ್ಧ ನೀರಿನ ಸೇವನೆಯಿಂದ ಹಲ್ಲು ಮತ್ತು ಮೂಳೆಗಳ ಬೆಳವಣಿಗೆ ಕುಂಠಿತ, ಮೂಳೆ ಸವೆತ, ಅತಿಯಾದ ಸುಸ್ತು ಮತ್ತು ಎದೆಯುಸಿರು ಸಮಸ್ಯೆಯಾಗಿದೆ. ಕಿಡ್ನಿ ಮತ್ತು ಲಿವರ್ ಸಮಸ್ಯೆಗಳು ಹಾಗೂ ಬಹು ಅಂಗಾಂಗ ವೈಫಲ್ಯದ ಸಾಧ್ಯತೆ ಎಂದು ಹೇಳಿದ್ದಾರೆ.
ಒಟ್ಟು 1,274 ಹಳ್ಳಿಗಳ ಪೈಕಿ 1,175 ಗ್ರಾಮಗಳಲ್ಲಿ ಅಂದರೆ ಶೇ. 92ರಷ್ಟು ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ 10 ಗ್ರಾಮಗಳಲ್ಲಿ ಚಿಕ್ಕಬಳ್ಳಾಪುರ-3, ಗೌರಿಬಿದನೂರು-5, ಶಿಡ್ಲಘಟ್ಟ-2 ನೀರು ಅತ್ಯಂತ ಅಶುದ್ಧವಾಗಿದ್ದು, ಆಯಾ ಪಂಚಾಯಿತಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನಿಮ್ಮ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಮಾತ್ರ ಕುಡಿಯಲು ಬಳಸಿ. ಸುಸ್ತು ಅಥವಾ ಕೀಲು ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಪ್ಲೊರೈಡ್ ಪ್ರಭಾವ ತಗ್ಗಿಸಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

