ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡ್ಲುಗುರ್ಕಿ ಗ್ರಾಮದಲ್ಲಿ ನಡೆದಿದೆ.
ಪತ್ನಿಯೇ ಪತಿಯನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮುನಿರಾಜು (42) ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ.
ಪತ್ನಿಯ ಅಕ್ರಮ ಸಂಬಂಧದಿಂದ ಸುಸ್ತಾಗಿದ್ದ ಮುನಿರಾಜು ಸಾವಿಗೆ ಆತನ ಪತ್ನಿ ಸುನಿತಾಳೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಪದೇ ಪದೇ ಮನೆ ಬಿಟ್ಟು ಬೇರೊಬ್ಬನ ಜೊತೆ ಹೋಗುತ್ತಿದ್ದಾಳೆಂದು ಮುನಿರಾಜು ಬೇಸರಗೊಂಡಿದ್ದನಂತೆ. ನಿನ್ನೆ ಮಧ್ಯರಾತ್ರಿ ಒಂದು ಗಂಟೆಯವರೆಗೂ ಸ್ಥಳೀಯರು ಹಾಗೂ ಪತ್ನಿಯ ಸಂಬಂಧಿಕರು ನ್ಯಾಯ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ.
ಅದಾದ ಬಳಿಕವೇ ಮುನಿರಾಜು ಅನುಮಾನಾಸ್ಫದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಘಟನೆ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

