ಬೆಂಗಳೂರು: ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್ ಇಲಾಖೆಯ 153 ಅಧಿಕಾರಿಗಳು, ಸಿಬ್ಬಂದಿ 2025 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ಆರ್ಪಿ ಮೈದಾನದಲ್ಲಿ ನಡೆಯಲಿರುವ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರಶಸ್ತಿ ಪುರಸ್ಕೃತರಿಗೆ ಪದಕ ಪ್ರದಾನ ಮಾಡಿ ಗೌರವಿಸಲಿದ್ದಾರೆ.
ಅತ್ಯಾಚಾರ ಆರೋಪದಲ್ಲಿ ಶಿಕ್ಷೆಗೆ ಗುರಿಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡದಲ್ಲಿದ್ದ ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಮತ್ತಿತರ ಮೂವರು ಐಪಿಎಸ್ ಅಧಿಕಾರಿಗಳು ಕೂಡ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಿಸಿಬಿಯ ಡಿಸಿಪಿ ಬಿ.ಎಲ್. ಶ್ರೀಹರಿಬಾಬು, ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಡಾ. ಎಂ. ಗೋಪಾಲ್ ಬ್ಯಾಕೋಡ್, ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಎಸಿಪಿ ಹೆಚ್.ಕೆ. ಮಹಾನಂದ, ಜಯನಗರ ಉಪವಿಭಾಗದ ಎಸಿಪಿ ವಿ. ನಾರಾಯಣಸ್ವಾಮಿ ಕೂಡ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.





