ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಈ ನಡುವೆ ಚಿತ್ರದ ಬಜೆಟ್ ವಿಷಯವೇ ಭಾರತೀಯ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಣಬೀರ್ ಕಪೂರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ 2 ಭಾಗಗಳ ಪೌರಾಣಿಕ ಚಿತ್ರವು ಭಾರತದ ಅತ್ಯಂತ ದುಬಾರಿ ಮತ್ತು ಬೃಹತ್ ವೆಚ್ಚದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾಜಿಕ ಜಾಲತಾಣಗಳು ಹಾಗೂ ಅಂತರ್ಜಾಲದಲ್ಲಿ ಈ ಸಿನಿಮಾದ ಒಟ್ಟು ವೆಚ್ಚ 4,000 ಕೋಟಿ ರೂಪಾಯಿ ಎಂದು ವರದಿಯಾಗುತ್ತಿದೆಯಾದರೂ, ಚಿತ್ರರಂಗದ ವಿಶ್ಲೇಷಕರ ಪ್ರಕಾರ 2 ಭಾಗಗಳ ಒಟ್ಟು ಬಜೆಟ್ ಸುಮಾರು 1,500 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬೃಹತ್ ವೆಚ್ಚದಲ್ಲಿ ವಿಶ್ವಮಟ್ಟದಲ್ಲಿ ಮಾಡಲಾಗುವ ಪ್ರಚಾರ ಕಾರ್ಯಕ್ರಮಗಳ ವೆಚ್ಚವೂ ಸೇರಿದೆ ಎನ್ನಲಾಗಿದೆ. 3 ಗಂಟೆ 15 ನಿಮಿಷಗಳ ಅವಧಿಯ ಮೊದಲ ಭಾಗವು ಐಮ್ಯಾಕ್ಸ್ ಹಾಗೂ 3D ರೂಪದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.
ಸಿನಿಮಾ ಬಿಡುಗಡೆಗೆ ಮುನ್ನವೇ ಡಿಜಿಟಲ್ ಹಾಗೂ ಆಡಿಯೋ ಹಕ್ಕುಗಳ ಮಾರಾಟದಿಂದಲೇ ನೂರಾರು ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳು 450 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದರೆ, ಸಂಗೀತದ ಹಕ್ಕುಗಳು 75 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ಬಿಕರಿಯಾಗಿವೆ. ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ತಂತ್ರಜ್ಞಾನ ಹಾಗೂ ವಿಎಫ್‌ಎಕ್ಸ್ ಬಳಸಿ ನಿರ್ಮಿಸಲಾಗಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದ ಗಡಿಗಳನ್ನು ದಾಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಎಂಬ ನಿರೀಕ್ಷೆಯಿದೆ.

