ದುರ್ಗ: ಛತ್ತೀಸ್‌ಗಢದ ದುರ್ಗ ಜಿಲ್ಲೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಮ್ಹಾರಿ ಪಟ್ಟಣದ ಖಾಪ್ರಿ ರಸ್ತೆ ಪ್ರದೇಶದಲ್ಲಿ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಕ್ರಮೇಣ ಮನೆಯಾದ್ಯಂತ ಹರಡಿ ಅಂತಿಮವಾಗಿ ಗ್ಯಾಸ್ ಸಿಲಿಂಡರ್ ಇರಿಸಲಾಗಿದ್ದ ಅಡುಗೆಮನೆಗೆ ತಲುಪಿತು. ಇದರಿಂದಾಗಿ ಪ್ರಬಲ ಸ್ಫೋಟ ಸಂಭವಿಸಿ ಇಡೀ ಮನೆಗೆ ವ್ಯಾಪಕ ಹಾನಿಯಾಯಿತು.
ಮೃತರನ್ನು ಹೋಮದಾಸ್ ವೈಷ್ಣವ್ (40), ಲಕ್ಷ್ಮಿ ವೈಷ್ಣವ್ (18), ಚಂದಾನಿ (17) ಮತ್ತು ಗೋಪಿಕಾ (2) ಎಂದು ಗುರುತಿಸಲಾಗಿದೆ.
ನೆರೆಹೊರೆಯವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ ವಿಫಲರಾದರು. ಘಟನೆಯ ನಂತರ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿವೆ. ತನಿಖೆಯನ್ನು ಪ್ರಾರಂಭಿಸಲಾಗಿದೆ.

