ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚೆನ್ನಮ್ಮ ಆರೋಗ್ಯದ ಸ್ಥಿತಿ ಗಂಭೀವಾಗಿದೆ ಎಂದು ಹೇಳಲಾಗಿತ್ತು. ಇದೀಗ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಸತ್ಯನಾರಾಯಣ ಚೆನ್ನಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಅವರ ಆರೋಗ್ಯದಲ್ಲಿ ಶುಕ್ರವಾರಕ್ಕಿಂತ ಇಂದು ಸುಧಾರಣೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಉಸಿರಾಟದ ತೊಂದರೆ ಶೇ 20ರಿಂದ 30ರಷ್ಟು ಹತೋಟಿಗೆ ಬಂದಿದ್ದು, ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯದ ಮಾನದಂಡಗಳು ಸ್ಥಿರವಾಗಿವೆ ಎಂದು ಅವರು ಹೇಳಿದ್ದಾರೆ. ಸದ್ಯ ವೆಂಟಿಲೇಟರ್ ಅಗತ್ಯವಿಲ್ಲದೆ ಸಹಜ ಉಸಿರಾಟ ನಡೆಯುತ್ತಿದೆ. ಆದರೆ ಸಂಪೂರ್ಣ ಚೇತರಿಕೆಗೆ ಇನ್ನೂ ಸಮಯ ಬೇಕಾಗಲಿದ್ದು, ಮುಂದಿನ ದಿನಗಳಲ್ಲೂ ಚಿಕಿತ್ಸೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

