HomeKarnatakaಕುಮಾರಸ್ವಾಮಿಗೆ ಮಹತ್ವದ ಮನವಿ ಮಾಡಿದ ಚಲುವರಾಯಸ್ವಾಮಿ!

ಕುಮಾರಸ್ವಾಮಿಗೆ ಮಹತ್ವದ ಮನವಿ ಮಾಡಿದ ಚಲುವರಾಯಸ್ವಾಮಿ!

ಮಂಡ್ಯ ಸಂಸದ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ಈ ಮೂಲಕ ಮಂಡ್ಯಕ್ಕೆ ಕೇಂದ್ರ ಸರ್ಕಾರದ ಯೋಜನೆ ತರುವ ವಿಚಾರದಲ್ಲಿ ಉಂಟಾಗಿದ್ದ ಜಟಾಪಟಿ ಅಂತಿಮ ಹಂತಕ್ಕೆ ಬಂದಿದೆ.

ಎನ್.ಚಲುವರಾಯಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ, ‘ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 500 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ನಮ್ಮ ರಾಜ್ಯ ಸರ್ಕಾರವು ಅಗತ್ಯವಿರುವ 105 ಎಕರೆ ಭೂಮಿಯನ್ನು ನೀಡಲು ಸಿದ್ಧವಿದೆ’ ಎಂದು ಹೇಳಿದ್ದಾರೆ.

‘ಈ ಸಂಬಂಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಅಧಿಕೃತವಾಗಿ ಪತ್ರ ಬರೆದು ಭೂಮಿ ನೀಡುವುದಾಗಿ ಭರವಸೆ ನೀಡಿರುವ ನಮ್ಮ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರ ನಡೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಈ ನಿರ್ಧಾರವನ್ನು ಶ್ಲಾಘಿಸುತ್ತೇನೆ’ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘​ಕೇಂದ್ರ ಸಚಿವರು ಈ ಯೋಜನೆಗಾಗಿ ಭೂಮಿ ಕೋರಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಕೂಡಲೇ, ರಾಜ್ಯ ಸರ್ಕಾರವು ವಿಳಂಬ ಮಾಡದೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಕ್ತ ಜಾಗ ಗುರುತಿಸಲು ಸೂಚಿಸಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಹಳ್ಳಿ ಗ್ರಾಮಗಳ ಬಳಿ 105 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿದ್ದಾರೆ’ ಎಂದು ವಿವರಿಸಿದ್ದಾರೆ.

‘ಈ ಜಾಗವು ನಾಗಮಂಗಲ-ಮಂಡ್ಯ ರಾಜ್ಯ ಹೆದ್ದಾರಿಗೆ ಕೇವಲ 500 ಮೀಟರ್ ದೂರದಲ್ಲಿದ್ದು, ಕೈಗಾರಿಕೆ ಸ್ಥಾಪನೆಗೆ ಎಲ್ಲಾ ರೀತಿಯಲ್ಲೂ ಸೂಕ್ತವಾಗಿದೆ. ಈ ಮೂಲಕ ರಾಜ್ಯ ಸರ್ಕಾರವು ಸಹಕಾರ ನೀಡುತ್ತಿಲ್ಲ ಎಂಬ ಕೇಂದ್ರ ಸಚಿವರ ಆರೋಪಕ್ಕೆ ಪೂರಕವಾದ ದಾಖಲೆಗಳೊಂದಿಗೆ ನಾವೀಗ ಉತ್ತರ ನೀಡಿದ್ದೇವೆ’ ಎಂದು ಹೇಳಿದ್ದಾರೆ.

‘​ಇನ್ನಾದರೂ ಕೇಂದ್ರ ಸಚಿವರು ಯಾವುದೇ ಸಬೂಬುಗಳನ್ನು ಹೇಳದೆ, ಕೂಡಲೇ ಕೇಂದ್ರ ಸರ್ಕಾರದ ಮತ್ತು ARAI ತಂಡಗಳನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟು ಸ್ಥಳ ಪರಿಶೀಲನೆ ನಡೆಸುವಂತೆ ಮಾಡಬೇಕು. ನಮ್ಮ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮನ್ವಯ ಸಾಧಿಸಿ, ಈ ಯೋಜನೆಯನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವ ಮೂಲಕ ಮಂಡ್ಯ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡದೆ, ಒಟ್ಟಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ಎಂ.ಬಿ.ಪಾಟೀಲ್ ಪೋಸ್ಟ್: ಕಳೆದ ವಾರ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಅದರಲ್ಲಿ, ‘ಭಾರತದ ಮೊದಲ ವಿಶೇಷ ARAI ಕೇಂದ್ರಕ್ಕಾಗಿ ಮಂಡ್ಯದಲ್ಲಿ ಭೂಮಿ ನೀಡಲು ಕರ್ನಾಟಕ ಸಿದ್ಧವಾಗಿದೆ’ ಎಂದು ಹೇಳಿದ್ದರು.

‘ದೇಶದ ಮೊಟ್ಟಮೊದಲ ನಿರ್ಮಾಣ ಉಪಕರಣಗಳು ಮತ್ತು ಮೂಲಸೌಕರ್ಯ ಪರೀಕ್ಷಾ ಸೌಲಭ್ಯವನ್ನು (ARAI ಕೇಂದ್ರ) ಸ್ಥಾಪಿಸಲು ಕರ್ನಾಟಕವು ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದೇನೆ. ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ ಇದನ್ನು ಮುಂದಕ್ಕೆ ಕೊಂಡೊಯ್ಯುವಂತೆ ಅವರನ್ನು ವಿನಂತಿಸಿದ್ದೇನೆ’ ಎಂದು ತಿಳಿಸಿದ್ದರು.

  • ಸ್ಥಳ: ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿ – ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ ಕೇವಲ 500 ಮೀಟರ್ ದೂರದಲ್ಲಿದೆ.
  • ಭೂಮಿ: ಕೇಂದ್ರ ಸರ್ಕಾರವು 100 ಎಕರೆ ಭೂಮಿಗೆ ವಿನಂತಿಸಿದ್ದು, ರಾಜ್ಯ ಸರ್ಕಾರವು 105 ಎಕರೆ ಮಂಜೂರು ಮಾಡಲು ಸಿದ್ಧವಿದೆ.
  • ಹೂಡಿಕೆ: ಪರೀಕ್ಷೆ, ಪ್ರಮಾಣೀಕರಣ ಮತ್ತು ಮೌಲ್ಯೀಕರಣಕ್ಕಾಗಿ ₹500 ಕೋಟಿ ವೆಚ್ಚದ ಅತ್ಯಾಧುನಿಕ ಸೌಲಭ್ಯ.
  • ವಿಶೇಷತೆ: ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷೆಗಾಗಿ ಭಾರತದ ಮೊದಲ ಮೀಸಲು ಕೇಂದ್ರ.

ಶೀಘ್ರದಲ್ಲೇ ಜಂಟಿ ಸ್ಥಳ ಪರಿಶೀಲನೆ ನಡೆಸುವಂತೆ ಕೇಂದ್ರ ತಂಡ ಮತ್ತು ARAI ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದೇನೆ. ವಿಶ್ವದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಈ ಉಪಕ್ರಮವು ಮಂಡ್ಯ ಜಿಲ್ಲೆ, ಸುತ್ತಮುತ್ತಲ ಪ್ರದೇಶ ಹಾಗೂ ಭಾರತದ ನಿರ್ಮಾಣ ವಲಯಕ್ಕೆ ಒಂದು ಐತಿಹಾಸಿಕ ಮೈಲಿಗಲ್ಲಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular