ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರವು ಬೇಕರಿ ಈಗ ಬೆಂಗಳೂರು ನಗರಕ್ಕೆ ಬಂದಿದೆ. ಹೌದು, ಖ್ಯಾತ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ ಭಾರತದ ಮೊದಲ ಮಳಿಗೆಯನ್ನು ಬೆಂಗಳೂರು ನಗರದಲ್ಲಿ ತೆರೆದಿದೆ. 5 ವರ್ಷದಲ್ಲಿ 250 ಕೋಟಿ ರೂ. ಆದಾಯದ ನಿರೀಕ್ಷೆಯನ್ನು ಹೊಂದಿದೆ.
ದಿ ಗೌರ್ಮೆಟ್ ಕೆಫೆ ಪಾಲುದಾರಿಕೆಯಲ್ಲಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ ಬೆಂಗಳೂರು ನಗರಕ್ಕೆ ಕಾಲಿಟ್ಟಿದೆ. ಭಾರತದಲ್ಲಿ 55 ಮಳಿಗೆಯನ್ನು ತೆರೆಯಲು ಯೋಜನೆ ರೂಪಿಸಿದ್ದು, ದೇಶದ ಮೊದಲ ಮಳಿಗೆ ಬೆಂಗಳೂರು ನಗರದಲ್ಲಿ ಆರಂಭವಾಗಿದೆ.
ಜಾಗತಿಕವಾಗಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿ ಭಾರೀ ಖ್ಯಾತಿ ಪಡೆದಿದೆ. ಈಗ ದಿ ಗೌರ್ಮೆಟ್ ಕೆಫೆ ಪಾಲುದಾರಿಕೆ ಮೂಲಕ ಇದು ಭಾರತದ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ದೇಶದಲ್ಲಿ ಬೆಳೆಯುತ್ತಿರುವ ಸಿಹಿತಿಂಡಿ ಮಾರುಕಟ್ಟೆ ವಿಸ್ತರಣೆ ಭಾಗವಾಗಿ ನಗರದಲ್ಲಿ ಮಳಿಗೆ ಪ್ರಾರಂಭಿಸಲಾಗಿದೆ ಎಂದು ಹೇಳಿದೆ.
ಗೌರ್ಮೆಟ್ ಕೆಫೆ ಮುಂದಿನ 4-5 ವರ್ಷಗಳಲ್ಲಿ ಭಾರತದಾದ್ಯಂತ 55 ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಿದೆ. ಒಟ್ಟು $60 ಮಿಲಿಯನ್ ಹೂಡಿಕೆಯೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಉತ್ಪನ್ನವನ್ನು ಪರಿಚಯಿಸುವುದು 5 ವರ್ಷಗಳಲ್ಲಿ ಈ ವ್ಯವಹಾರವು 200–250 ಕೋಟಿ ಆದಾಯವನ್ನು ಗಳಿಸುವ ನಿರೀಕ್ಷೆ ಹೊಂದಿದೆ.
ಬೆಂಗಳೂರು ನಂತರ 2026ರಲ್ಲಿ ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್ ನಗರದಲ್ಲಿ ಮಳಿಗೆಯನ್ನು ತೆರಯಲಾಗುತ್ತದೆ ಎಂದು ಹೇಳಿದೆ. ಬಳಿಕ ಚಂಡೀಗಢ, ಕೊಚ್ಚಿ, ಕೊಯಮತ್ತೂರು ನಗರದಲ್ಲಿ ಮಳಿಗೆ ಪ್ರಾರಂಭವಾಗಲಿದೆ. ಮೆಟ್ರೋ ನಗರದಲ್ಲಿ 6-10 ಮಳಿಗೆಯನ್ನು ಮೊದಲ ಹಂತದಲ್ಲಿ ಆರಂಭಿಸಲಿದೆ.
ದಿ ಗೌರ್ಮೆಟ್ ಕೆಫೆ ಸಂಸ್ಥಾಪಕ ಮತ್ತು ಸಿಇಒ ಮಸ್ತಾನ್ ಆಡಮ್ ಮಾತನಾಡಿ, “ಜಾಗತಿಕವಾಗಿ ಗುರುತಿಸಲ್ಪಟ್ಟ ಸಿಹಿತಿಂಡಿ ಬ್ರಾಂಡ್‌ಗಳು ಮತ್ತು ಪ್ರೀಮಿಯಂ ಕೆಫೆ ಅನುಭವಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ನಾವು ನೋಡುತ್ತಿದ್ದೇವೆ” ಎಂದು ಹೇಳಿದರು.
“ದಿ ಗೌರ್ಮೆಟ್ ಕೆಫೆ ಮೂಲಕ ಭಾರತೀಯ ಗ್ರಾಹಕರಿಗೆ ವಿಶ್ವ ದರ್ಜೆಯ ಸಿಹಿತಿಂಡಿ ಕೊಡುಗೆಗಳನ್ನು ಪರಿಚಯಿಸುವ ನಮ್ಮ ಪ್ರಯಾಣದಲ್ಲಿ ಚೀಸ್‌ಕೇಕ್ ಫ್ಯಾಕ್ಟರಿ ಬೇಕರಿಯನ್ನು ಭಾರತಕ್ಕೆ ಪರಿಚಯಿಸಿದ್ದು ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಇರುವ ದಿ ಗೌರ್ಮೆಟ್ ಕೆಫೆ ಬಹು-ಬ್ರಾಂಡ್ ಕಂಪನಿಯಾಗಿದ್ದು, ಇದು ವಿಶೇಷ ಮೆನು, ಗುಣಮಟ್ಟದ ಪದಾರ್ಥ ಮತ್ತು ಸ್ಮರಣೀಯ ಅನುಭವಗಳನ್ನು ಗ್ರಾಹಕರಿಗೆ ನೀಡಲು ಗಮನ ಕೇಂದ್ರೀಕರಿಸುತ್ತದೆ.

