ರಾಯ್ಪುರ: ಅಕ್ರಮ ಸಂಬಂಧದ ಶಂಕೆಯಲ್ಲಿ ಪತ್ನಿಯೊಬ್ಬಳು ಗಾಢ ನಿದ್ದೆಯಲ್ಲಿದ್ದ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಆತನ ಖಾಸಗಿ ಅಂಗವನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದಿದೆ.
ವೃತ್ತಿಯಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ರಾಜೇಶ್ ಕೌಶಿಕ್ ಎಂಬಾತನೇ ಪತ್ನಿಯಿಂದ ಹಲ್ಲೆಗೊಳಗಾದ ಪತಿ. ಸದ್ಯ ತೀವ್ರ ರಕ್ತಸ್ರಾವ ಹಾಗೂ ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಸ್ಥಳೀಯ ಸರ್ಕಾರಿ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರಾಜೇಶ್ ಕೌಶಿಕ್ ಮತ್ತು ಆತನ ಪತ್ನಿ ದ್ರೌಪದಿ ಬಾಯಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹವಿತ್ತು. ರಾಜೇಶ್ಗೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ದ್ರೌಪದಿ ಅನುಮಾನಿಸುತ್ತಿದ್ದಳು. ಘಟನೆ ನಡೆದ ರಾತ್ರಿ ಕೂಡ ಇಬ್ಬರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಆದರೆ, ತಡರಾತ್ರಿ ಪತಿ ರಾಜೇಶ್ ಗಾಢ ನಿದ್ದೆಯಲ್ಲಿದ್ದಾಗ, ದ್ರೌಪದಿ ಕತ್ತಿಯಿಂದ ಆತನ ಖಾಸಗಿ ಭಾಗಗಳನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾಳೆ.
ಗಂಭೀರವಾಗಿ ಹಲ್ಲೆಗೊಳಗಾಗಿರುವ ರಾಜೇಶ್ ತೀವ್ರ ರಕ್ತಸ್ರಾವದ ನಡುವೆಯೂ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿಬಂದಿದ್ದಾರೆ. ತಂದೆಯ ಕಿರುಚಾಟ ಕೇಳಿ ಎಚ್ಚರಗೊಂಡ ಅಪ್ರಾಪ್ತ ಮಗ ತಕ್ಷಣವೇ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಕುಟುಂಬಸ್ಥರು ರಾಜೇಶ್ ಮತ್ತು ಆತನ ಕತ್ತರಿಸಿದ ದೇಹದ ಭಾಗವನ್ನು ಹಿಡಿದುಕೊಂಡು ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆ ದ್ರೌಪದಿ ಬಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಅನೈತಿಕ ಸಂಬಂಧದ ಅನುಮಾನ ಮತ್ತು ನಿರಂತರದ ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ.

