ನ್ಯೂಯಾರ್ಕ್: ಆಧುನಿಕ ಯುಗದಲ್ಲಿ ತಂತ್ರಜ್ಞಾನವು ಮನುಷ್ಯನಿಗೆ ಎಷ್ಟು ಹತ್ತಿರವಾಗಿದೆ ಎಂದರೆ, ಅದು ಈಗ ಮನುಷ್ಯನ ಗುಟ್ಟುಗಳನ್ನು ರಟ್ಟು ಮಾಡುವ ಹಂತಕ್ಕೆ ಬಂದು ನಿಂತಿದೆ. ನ್ಯೂಯಾರ್ಕ್ ನಗರದಲ್ಲಿ 27 ವರ್ಷದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಹೋಟೆಲ್‌ಗೆ ಹೋದಾಗ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಊಟದ ಮೇಜಿನ ಮೇಲೆ ಚಾಟ್-ಜಿಪಿಟಿ ಪ್ರವೇಶ: ಬ್ಲೇನ್ ಆಂಡರ್ಸನ್ ಎಂಬ ಡೇಟಿಂಗ್ ಕೋಚ್ ಹಂಚಿಕೊಂಡಿರುವ ಈ ಕಥೆಯ ಪ್ರಕಾರ, 27 ವರ್ಷದ ಯುವತಿಯು ಹಣಕಾಸು ಕ್ಷೇತ್ರದಲ್ಲಿ ಕೆಲಸ ಮಾಡುವ 40 ವರ್ಷದ ವ್ಯಕ್ತಿಯೊಂದಿಗೆ ಡೇಟಿಂಗ್‌ಗೆ ಹೋಗಿದ್ದಳು. ಇಡೀ ರಾತ್ರಿ ಆ ವ್ಯಕ್ತಿ ತನ್ನ ಫೋನ್‌ನಲ್ಲಿ ಚಾಟ್-ಜಿಪಿಟಿ ಬಳಸುತ್ತಾ, ಕಾಕ್‌ಟೇಲ್‌ಗಳ ಇತಿಹಾಸದ ಬಗ್ಗೆ ಕೇಳುತ್ತಾ ಅದನ್ನೇ ಗಟ್ಟಿಯಾಗಿ ಓದುತ್ತಿದ್ದ. ಅವನ ಈ ವಿಚಿತ್ರ ವರ್ತನೆಯಿಂದ ಯುವತಿಗೆ ಸ್ವಲ್ಪ ಕಿರಿಕಿರಿ ಉಂಟಾಗಿತ್ತು.
“ನನ್ನ ಬಗ್ಗೆ ಬೇಕಾದ್ದನ್ನು ಕೇಳು” ಎಂದಿದ್ದೇ ತಪ್ಪಾಯ್ತು:ಡೇಟಿಂಗ್ ಮುಗಿಯುವ ಸಮಯದಲ್ಲಿ ಆಕೆ ಆತನ ಚಾಟ್-ಜಿಪಿಟಿ ಹುಚ್ಚಿನ ಬಗ್ಗೆ ತಮಾಷೆ ಮಾಡಿದಳು. ಆಗ ಆ ವ್ಯಕ್ತಿ, “ಚಾಟ್-ಜಿಪಿಟಿ ನನ್ನ ಬೆಸ್ಟ್ ಫ್ರೆಂಡ್, ನನ್ನ ಬಗ್ಗೆ ನಿನಗೆ ಏನು ಬೇಕಾದರೂ ಇದನ್ನು ಕೇಳು” ಎಂದು ತನ್ನ ಫೋನ್ ಅವಳ ಕೈಗೆ ಕೊಟ್ಟನು. ಕುತೂಹಲಗೊಂಡ ಯುವತಿ, “ಬೇರೆ ಯಾರೊಂದಿಗೂ ಹಂಚಿಕೊಳ್ಳದ, ನನ್ನಲ್ಲಿ ನಿನಗೆ ಇಷ್ಟವಾದ ಒಂದು ವಿಷಯವನ್ನು ಹೇಳು” ಎಂದು ಚಾಟ್-ಜಿಪಿಟಿಗೆ ಕೇಳಿದಳು.
AI ನೀಡಿದ ಆಘಾತಕಾರಿ ಉತ್ತರ: ಯುವತಿಯ ಪ್ರಶ್ನೆಗೆ ಚಾಟ್-ಜಿಪಿಟಿ ನೀಡಿದ ಉತ್ತರ ಅವಳನ್ನು ಬೆಚ್ಚಿಬೀಳಿಸಿತು. ಅದು, “ನಿಮ್ಮ ಪತ್ನಿಗೆ ನೀವು ಎಷ್ಟು ಕಾಳಜಿಯುಳ್ಳ ಪತಿ ಮತ್ತು ನಿಮ್ಮ ಮಕ್ಕಳಿಗೆ ಎಷ್ಟು ಉತ್ತಮ ತಂದೆಯಾಗಿದ್ದೀರಿ ಎಂಬುದು ನನಗೆ ತುಂಬಾ ಇಷ್ಟ“ ಎಂದು ಉತ್ತರಿಸಿತು! ಅಲ್ಲಿಯವರೆಗೆ ತಾನು ಅವಿವಾಹಿತ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ಬಣ್ಣವನ್ನು ಅವನ ‘ಬೆಸ್ಟ್ ಫ್ರೆಂಡ್’ ಆದ AI ಕೇವಲ ಒಂದೇ ಕ್ಷಣದಲ್ಲಿ ಬಯಲು ಮಾಡಿತು.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ: ಈ ವಿಷಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. “ತಂತ್ರಜ್ಞಾನವು ಪ್ರಣಯವನ್ನು ಹಾಳುಮಾಡುತ್ತಿದೆ” ಎಂದು ಒಬ್ಬರು ಹೇಳಿದರೆ, “ಚಾಟ್-ಜಿಪಿಟಿ ಆ ಯುವತಿಗೆ ದೊಡ್ಡ ಉಪಕಾರ ಮಾಡಿದೆ, ಮೋಸಗಾರನಿಂದ ಅವಳನ್ನು ಕಾಪಾಡಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.

