ಸೌಂದರ್ಯದ ಕಾಳಜಿಯಿಂದ ಸಲೂನ್‌ಗಳಿಗೆ ಹೋಗುವ ಗ್ರಾಹಕರಿಗೆ ಚಂದೀಗಢದ ಗ್ರಾಹಕ ನ್ಯಾಯಾಲಯವು ಮಹತ್ವದ ಸಂದೇಶವೊಂದನ್ನು ನೀಡಿದೆ. ಹೇರ್ ಸ್ಮೂತ್ನಿಂಗ್ ಪ್ರಕ್ರಿಯೆಯ ವೇಳೆ ಅಜಾಗರೂಕತೆಯಿಂದ ಮಹಿಳೆಯೊಬ್ಬರ ಕೂದಲು ಸುಟ್ಟುಹೋಗುವಂತೆ ಮಾಡಿದ ಖ್ಯಾತ ಸಲೂನ್ ಒಂದಕ್ಕೆ 25,000 ರೂಪಾಯಿ ದಂಡ ವಿಧಿಸಲಾಗಿದೆ.
ಘಟನೆಯ ವಿವರ: ಮೊಹಾಲಿಯ ಸೆಕ್ಟರ್ 91 ರ ನಿವಾಸಿ ಜ್ಯೋತ್ಸ್ನಾ ಎಂಬುವವರು ಡಿಸೆಂಬರ್ 2023 ರಲ್ಲಿ ಸ್ಥಳೀಯ ‘ಹೇರ್ ರೈಸರ್ಸ್’ (Hair Raiserz) ಸಲೂನ್‌ನಲ್ಲಿ 8,000 ರೂಪಾಯಿ ನೀಡಿ ‘ಕೆರಾ-ಸ್ಮೂತ್ ಟ್ರೀಟ್‌ಮೆಂಟ್’ ಮಾಡಿಸಿಕೊಂಡಿದ್ದರು. ಎರಡು ದಿನಗಳ ಕಾಲ ನಡೆದ ಈ ಪ್ರಕ್ರಿಯೆಯಲ್ಲಿ ರಾಸಾಯನಿಕಗಳ ಬಳಕೆ ಮತ್ತು ಹೀಟ್ ಸ್ಟೈಲಿಂಗ್ ಮಾಡಲಾಗಿತ್ತು. ಆದರೆ ಪ್ರಕ್ರಿಯೆ ಮುಗಿದ ಕೆಲವು ದಿನಗಳಲ್ಲೇ ಅವರ ಕೂದಲಿನಿಂದ ಅಸಹ್ಯಕರ ವಾಸನೆ ಬರಲು ಆರಂಭಿಸಿತ್ತು. ಫೆಬ್ರವರಿ 2024 ರ ಸುಮಾರಿಗೆ ಅವರ ತಲೆಯ ಎಡಭಾಗದ ಕೂದಲು ಸುಟ್ಟುಹೋಗಿರುವುದು ಪತ್ತೆಯಾಗಿತ್ತು. ಅತಿಯಾದ ಶಾಖ ಮತ್ತು ಕೆಮಿಕಲ್ ಬಳಕೆಯಿಂದಾಗಿ ಈ ಹಾನಿ ಸಂಭವಿಸಿದೆ ಎಂದು ಅವರು ದೂರಿದ್ದರು.
ಸಲೂನ್ ವಾದವೇನು? ಈ ಬಗ್ಗೆ ಗ್ರಾಹಕಿ ಸಲೂನ್ ಗಮನಕ್ಕೆ ತಂದಾಗ ಅವರು ಹಾರಿಕೆಯ ಉತ್ತರ ನೀಡಿದ್ದರು. ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸಲೂನ್ ಮಾಲೀಕರು, “ಗ್ರಾಹಕರು ಸೇವೆಯ ಬಗ್ಗೆ ಮೊದಲು ತೃಪ್ತಿ ವ್ಯಕ್ತಪಡಿಸಿದ್ದರು. ನಮ್ಮ ಸಿಬ್ಬಂದಿ ವೃತ್ತಿಪರವಾಗಿ ಕೆಲಸ ಮಾಡಿದ್ದಾರೆ. ಒಂದು ತಿಂಗಳ ನಂತರ ಅವರು ದೂರು ನೀಡಿದ್ದಾರೆ” ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.
ನ್ಯಾಯಾಲಯದ ತೀರ್ಪು: ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಸಲೂನ್ ಪರ ವಾದವನ್ನು ತಳ್ಳಿಹಾಕಿತು. ಸ್ಮೂತ್ನಿಂಗ್ ಪ್ರಕ್ರಿಯೆಯಲ್ಲಿ ಬಳಸುವ ರಾಸಾಯನಿಕಗಳ ಅಡ್ಡಪರಿಣಾಮಗಳ ಬಗ್ಗೆ ಗ್ರಾಹಕರಿಗೆ ಮೊದಲೇ ಮಾಹಿತಿ ನೀಡಿರುವ ಯಾವುದೇ ದಾಖಲೆ ಸಲೂನ್ ಬಳಿ ಇಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅತಿಯಾದ ಶಾಖದ ಬಳಕೆಯಿಂದ ಗ್ರಾಹಕಿಯ ಕೂದಲು ಸುಟ್ಟಿರುವುದು ಮತ್ತು ಇದರಿಂದ ಅವರು ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಪರಿಣಾಮವಾಗಿ, ಗ್ರಾಹಕಿಗೆ ಉಂಟಾದ ಮಾನಸಿಕ ತಲ್ಲಣ ಮತ್ತು ಹಾನಿಗೆ ಪರಿಹಾರವಾಗಿ 25,000 ರೂಪಾಯಿ ನೀಡುವಂತೆ ಸಲೂನ್ ಬ್ರ್ಯಾಂಡ್ ಮತ್ತು ಅದರ ಫ್ರಾಂಚೈಸಿಗೆ ನ್ಯಾಯಾಲಯ ಆದೇಶಿಸಿದೆ.

