ಚಾಮರಾಜನಗರ: ಇಷ್ಟು ದಿನ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ದುಷ್ಕರ್ಮಿಗಳು ಇದೀಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ಮೊಬೈಲ್‌ಗೇ ಇಂಟರ್‌ನೆಟ್ ಕರೆ ಮಾಡಿ, ಆರೋಪಿಗಳಿಗೆ ಜಾಮೀನು ನೀಡದಿದ್ದರೆ ಕೊಲ್ಲುವುದಾಗಿ ದುಷ್ಕರ್ಮಿಗಳು ಜೀವ ಬೆದರಿಕೆ ಒಡ್ಡಿದ್ದಾರೆ.
ಅನಾಮಧೇಯ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೊಬೈಲ್‌ಗೆ ಕರೆ ಮಾಡಿ ನ್ಯಾಯಾಲಯದಲ್ಲಿ ಸದ್ಯ ವಿಚಾರಣೆಯಲ್ಲಿರುವ ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ತಕ್ಷಣವೇ ಜಾಮೀನು ಮಂಜೂರು ಮಾಡಬೇಕೆಂದುಒತ್ತಾಯಿಸಿದ್ದಾನೆ. ಒಂದು ವೇಳೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಲ್ಲಿ ಮುಂದಿನ ಟಾರ್ಗೆಟ್ ನೀನೇ, ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಅವಾಚ್ಯ ಶಬ್ದ ಬಳಸಿ ಏಕವಚನದಲ್ಲಿ ನಿಂದಿಸಿದ್ದಾನೆ.
ತನಿಖೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಿಡಿಗೇಡಿಗಳು ತಾಂತ್ರಿಕ ವ್ಯವಸ್ಥೆಯನ್ನು ಬಳಸಿ 41000697200 ಸಂಖ್ಯೆಯಿಂದ ಅನಾಮಧೇಯ ಇಂಟರ್‌ನೆಟ್ ಕಾಲ್ ಮಾಡಿದ್ದಾರೆ. ನ್ಯಾಯಾಧೀಶರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪ್ರಾಣ ಬೆದರಿಕೆ ಹಾಕಿರುವ ಕುರಿತು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿ.ಜೆ.ಎಂ. ರವರು ಮೌಖಿಕವಾಗಿ ಠಾಣೆಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕವಾಗಿ ಈ ಸಂಖ್ಯೆಯನ್ನು ಪತ್ತೆ ಹಚ್ಚಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಚಾಮರಾಜನಗರ ಜಿಲ್ಲಾ ಕೋರ್ಟ್‌ಗೆ ನಾಲ್ಕಕ್ಕೂ ಹೆಚ್ಚು ಬಾರಿ ಹುಸಿ ಬಾಂಬ್ ಇ-ಮೇಲ್ ಬೆದರಿಕೆಗಳು ಬಂದಿದ್ದವು. ಇದೀಗ ನೇರವಾಗಿ ನ್ಯಾಯಾಧೀಶರಿಗೇ ಬೆದರಿಕೆ ಕರೆ ಬಂದಿರುವುದು ನ್ಯಾಯಾಂಗ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚಾಮರಾಜನಗರ ಪಟ್ಟಣ ಪೊಲೀಸರು ಅನಾಮಧೇಯ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

