ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ದಿನಗಣನೆ ಆರಂಭವಾಗಿದೆ. ಇದೇ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿ ಆರಂಭಗೊಳ್ಳಲಿದೆ.
ಇನ್ನು ಟೂರ್ನಿಗೆ ಈಗಾಗಲೇ ಆಟಗಾರರ ತಾಲೀಮು ಆರಂಭವಾಗಿದ್ದು, ಎಲ್ಲರೂ ತಮ್ಮ ತಮ್ಮ ಕ್ಯಾಂಪ್ ಸೇರಿಕೊಂಡು ತರಬೇತಿಯಲ್ಲಿ ನಿರತರಾಗಿದ್ದಾರೆ. ಇನ್ನು ಕೆಲ ಆಟಗಾರರು ಸಂದರ್ಶನಗಳಲ್ಲಿ ಭಾಗಿಯಾಗಿದ್ದು, ಟೂರ್ನಿಯ ಕುರಿತು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಸದ್ಯ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿರುವ ಯುಜ್ವೇಂದ್ರ ಚಹಲ್ ಎಬಿ ಡಿ ವಿಲಿಯರ್ಸ್ ಚಾನೆಲ್ನ ಸಂದರ್ಶನದಲ್ಲಿ ಭಾಗವಹಿಸಿ ಟೂರ್ನಿ ಹಾಗೂ ಕಳೆದ ವರ್ಷ ತಮ್ಮ ತಂಡ ರನ್ನರ್ ಅಪ್ ಆದದ್ದರ ಕುರಿತು ಮಾತನಾಡಿದ್ದಾರೆ.
ಮೊದಲಿಗೆ ತಂಡಕ್ಕಾಗಿ ತಾವು ನಡೆಸಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾತನಾಡಿದ ಚಹಲ್ ‘ನಾನು ಮದ್ಯಪಾನ ಮಾಡುವುದನ್ನು ನಿಲ್ಲಿಸಿದ್ದೇನೆ. ಮದ್ಯಪಾನ ಸೇವಿಸಿ ಆರು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ನನಗೀಗ 35 ವರ್ಷವಾಗಿದ್ದು, ತಂಡಕ್ಕೆ 150% ಕೊಡುಗೆ ನೀಡಬೇಕು ಎಂಬ ಹಂಬಲದಲ್ಲಿದ್ದೇನೆ. ಓರ್ವ ಹಿರಿಯ ಆಟಗಾರನಾಗಿ ಐಪಿಎಲ್ನಲ್ಲಿ ಇತರರು ನನ್ನಿಂದ ಕೆಲ ವಿಷಯಗಳನ್ನು ಕಲಿಯಲಿ ಎಂದು ಇಚ್ಛಿಸುತ್ತೇನೆ’ ಎಂದರು.
ಬಳಿಕ ಕಳೆದ ವರ್ಷ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ 6 ರನ್ಗಳ ಸೋಲನ್ನು ಕಂಡದ್ದರ ಬಗ್ಗೆ ಮಾತನಾಡಿದ ಚಹಲ್ ‘ಫೈನಲ್ನಲ್ಲಿ ಮಾರ್ಕೊ ಯಾನ್ಸೆನ್ ಇರಲಿಲ್ಲ, ಆತನನ್ನು ಮಿಸ್ ಮಾಡಿಕೊಂಡೆವು. ಆತನೇನಾದರೂ ಇದ್ದಿದ್ದರೆ ಖಂಡಿತವಾಗಿ ಚಾಂಪಿಯನ್ ಆಗುತ್ತಿದ್ದೆವು. ಟೂರ್ನಿಯುದ್ದಕ್ಕೂ ಆತ ಬೌಲಿಂಗ್ ಮಾಡಿದ್ದ ರೀತಿ ಅದ್ಭುತವಾಗಿತ್ತು. ಬ್ಯಾಟಿಂಗ್ನಲ್ಲೂ ಅಷ್ಟೇ ಕೊನೆಯಲ್ಲಿ ಎರಡರಿಂದ ಮೂರು ಸಿಕ್ಸರ್ ಬಾರಿಸುವ ತಾಕತ್ತು ಆತನಿಗಿತ್ತು. ನಾವು ಈಗ ಇನ್ನೂ ವಿಶ್ವಾಸದಲ್ಲಿದ್ದೇವೆ. ಏಕೆಂದರೆ ಆತ ಬೌಲಿಂಗ್ ಮಾಡುತ್ತಿರುವ ರೀತಿ ನೋಡಿದರೆ ಎದುರಾಳಿ ಆರಂಭಿಕರಿಗೆ ಸುಲಭವಾಗಿರುವುದಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

