ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಅಕ್ಬರ್ ರಸ್ತೆಯ ಹಳೆಯ ಪ್ರಧಾನ ಕಚೇರಿ ಮತ್ತು ರೈಸೀನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಗಳನ್ನು ಮಾರ್ಚ್ 28 ರೊಳಗೆ ತೆರವುಗೊಳಿಸುವಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ ಎಸ್ಟೇಟ್ ಇಲಾಖೆಯ ಆಸ್ತಿ ನಿರ್ವಹಣಾ ವಿಭಾಗದಿಂದ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಅಕ್ಬರ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ಕಳೆದ ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಕಾರ್ಯನಿರ್ವಹಿಸಿದ್ದು, ಕಳೆದ ವರ್ಷ ಪಕ್ಷದ ಪ್ರಧಾನ ಕಚೇರಿಯನ್ನು ಕೋಟ್ಲಾ ರಸ್ತೆಯಲ್ಲಿರುವ ಇಂದಿರಾ ಭವನಕ್ಕೆ ಸ್ಥಳಾಂತರಿಸಲಾಗಿದೆ.
ಆದರೆ ಅಕ್ಬರ್ ರಸ್ತೆಯ ಕಚೇರಿಯನ್ನು ತೆರವುಗೊಳಿಸಿಲ್ಲ. ಪಕ್ಷದ ಚಟುವಟಿಕೆ ಮುಂದುವರೆಸಿಕೊಂಡು ಬರುತ್ತಿದೆ. ಸರ್ಕಾರದ ನೋಟಿಸ್ ಬೆನ್ನಲ್ಲೇ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, ಕಚೇರಿ ತೆರವಿಗೆ ಹೆಚ್ಚುವರಿ ಸಮಯ ಕೋರಲು ನಿರ್ಧರಿಸಿದೆ. ವಸತಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕರ ನಿಯೋಗ ನೋಟಿಸ್ ಬಗ್ಗೆ ಚರ್ಚೆ ನಡೆಸಿದೆ.

