HomeKarnatakaರೈತರಿಗೆ ಗುಡ್ ನ್ಯೂಸ್: ಖಾತೆಗೆ ಬರ ಪರಿಹಾರ ಮೊದಲ ಕಂತಿನ ನೆರವು ಜಮಾ: ಸಿಎಂ ಘೋಷಣೆ

ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬರ ಪರಿಹಾರ ಮೊದಲ ಕಂತಿನ ನೆರವು ಜಮಾ: ಸಿಎಂ ಘೋಷಣೆ

ಬೆಂಗಳೂರು: ಬರ ಪರಿಹಾರ ನೀಡದ ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿ ರೈತರಿಗೆ ಮೊದಲ ಕಂತಿನ ನೆರವು ಘೋಷಣೆ ಮಾಡಿದ್ದು, 2000 ರೂ.ವರೆಗೆ ಬರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಮೂರ್ನಾಲ್ಕು ದಿನದಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ರಾಜ್ಯದ ಇನ್ನೂ 223 ತಾಲೂಕುಗಳಲ್ಲಿ ಬರ ಘೋಷಣೆಯಾಗಿದ್ದು, ಕೇಂದ್ರದಿಂದ ಬೆಳೆ ನಷ್ಟ ಪರಿಹಾರ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ 2000 ರೂ.ವರೆಗೆ ಬರ ಪರಿಹಾರ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರ ಪರಿಹಾರ ಸಂಬಂಧ ಕೇಂದ್ರಕ್ಕೆ ಬರೆದ ಪತ್ರಗಳಿಗೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ತಲಾ 2,000 ರೂ.ವರೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡಲು ಕೇಂದ್ರಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಇನ್ನೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ‌. 18,171 ಕೋಟಿ ರೂ.ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಾಸ್ ಕೊಟ್ಟರೂ ಸಾಕು ನಮ್ಮ ರೈತರ ಕಷ್ಟಕ್ಕೆ ಸಹಾಯವಾಗುತ್ತಿತ್ತು ಎಂದು ಹೇಳಿದ್ದಾರೆ.

ಸೆಪ್ಟಂಬರ್ 21 ರಂದು ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಅಕ್ಟೋಬರ್ 4 ರಿಂದ 9ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡವನ್ನು ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ರೂ.4,663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ಖುದ್ದು ಭೇಟಿ ಮಾಡಲು ಸಮಯ ಕೊಡಿ ಎಂದು ಪತ್ರ ಬರೆದಿದ್ದೆ. ಇವತ್ತಿನವರೆಗೂ ಸಮಯ ಕೊಟ್ಟಿಲ್ಲ.

ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ ರೂ.460 ಕೋಟಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವಿಗೆ ರೂ.327 ಕೋಟಿ ಬಿಡುಗಡೆ, ರೂ.780 ಕೋಟಿ DC ಗಳ PD ಖಾತೆಯಲ್ಲಿದೆ. ಅವರೂ ತಹಶೀಲ್ದಾರ್ ಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular