ನವದೆಹಲಿ: ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿ ನೀಡುವ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ರೀತಿಯಲ್ಲಿ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಫಲಾನುಭವಿಗಳ ಕುಟುಂಬದಲ್ಲಿ ಉಳಿತಾಯ ಮತ್ತು ಬಳಕೆ ಎರಡೂ ಹೆಚ್ಚಾಗಿದೆ.
ಆದರೆ ವೆಚ್ಚ ಮತ್ತು ಹಣದುಬ್ಬರ ಹೆಚ್ಚಾದಂತೆ ಕಾಲಕಾಲಕ್ಕೆ ಹೀಗೆ ನೀಡುವ ಹಣವನ್ನು ಕೂಡ ಪರಿಷ್ಕರಣೆ ಮಾಡಬೇಕು ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ತನ್ನ ಇತ್ತೀಚಿನ ಕಾರ್ಯಪತ್ರದಲ್ಲಿ ಪ್ರಸ್ತಾಪಿಸಿದೆ.
ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ 28,600 ಕೋಟಿ ರೂ., ಪಶ್ಚಿಮ ಬಂಗಾಳದಲ್ಲಿ 36,000 ಕೋಟಿ ರೂಪಾಯಿ ಅನುದಾನವನ್ನು ಇಂತಹ ಯೋಜನೆಗಳಿಗೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.
ಇಂತಹ ಯೋಜನೆ ದೀರ್ಘ ಕಾಲದಿಂದ ಜಾರಿಯಲ್ಲಿರುವ ರಾಜ್ಯಗಳ ಪೈಕಿ ಮಹಿಳೆಯರಿಗೆ ಹಣ ವಿತರಿಸುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಬಜೆಟ್ ನಲ್ಲಿ 28,600 ಕೋಟಿ ರೂ. ನಿಗದಿಯಾಗಿದೆ. 15 ಹೆಚ್ಚು ರಾಜ್ಯಗಳಲ್ಲಿ ಈ ಯೋಜನೆ ಜಾರಿಯಾಗಿದ್ದು, 12 ಕೋಟಿ ಮಹಿಳೆಯರಿಗೆ 1.7 ಲಕ್ಷ ಕೋಟಿ ರೂಪಾಯಿ ಹಣ ವಿನಯೋಗಿಸಲಾಗಿದೆ. ಯೋಜನೆ ಜಾರಿಯಾದ ಬಳಿಕ ಮಹಾರಾಷ್ಟ್ರ, ಒಡಿಶಾದಲ್ಲಿ ಕುಟುಂಬದ ವೆಚ್ಚದಲ್ಲಿ ಏರಿಕೆ ಕಂಡು ಬಂದಿದೆ.
ಯೋಜನೆಯನ್ನು ಕುಟುಂಬಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಾಕ್ಷರತೆ ಸ್ವಸಹಾಯ ಸಂಘಗಳ ಜೊತೆ ಜೋಡಿಸಬೇಕು. ಕುಟುಂಬ ವೆಚ್ಚ, ಹಣದುಬ್ಬರಕ್ಕೆ ಅನುಗುಣವಾಗಿ ಕಾಲ ಕಾಲಕ್ಕೆ ಮಹಿಳೆಯರಿಗೆ ನೀಡುವ ಹಣದ ಮೊತ್ತ ಪರಿಷ್ಕರಿಸಬೇಕು ಎಂದು ಸಲಹೆ ನೀಡಲಾಗಿದೆ.

