ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಸುಕನ್ಯಾ ಸಮೃದ್ಧಿ ಯೋಜನೆ’ (Sukanya Samriddhi Yojana – SSY) ನಿಮ್ಮ ಮಗಳ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಕ್ಕಾಗಿ ಹಣವನ್ನು ಉಳಿಸಲು ಇರುವ ಅತ್ಯುತ್ತಮ ಮತ್ತು ಸುರಕ್ಷಿತವಾದ ಮಾರ್ಗವಾಗಿದೆ. ಮಗುವಿನ ತಂದೆ-ತಾಯಿ ಅಥವಾ ಕಾನೂನುಬದ್ಧ ಪೋಷಕರು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬಹುದು. ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯವಿರುತ್ತದೆ. (ಒಂದು ವೇಳೆ ಅವಳಿ ಅಥವಾ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದರೆ, ದಾಖಲೆಗಳನ್ನು ನೀಡಿ ಹೆಚ್ಚುವರಿ ಖಾತೆ ತೆರೆಯಬಹುದು).
‘ ಬೇಟಿ ಪಡಾವೋ’ ಅಭಿಯಾನದ ಭಾಗವಾಗಿ 2015ರ ಜನವರಿ 22 ರಂದು ಆರಂಭವಾದ ‘ಸುಕನ್ಯಾ ಸಮೃದ್ಧಿ ಯೋಜನೆ’ (SSY) ಯಶಸ್ವಿಯಾಗಿ 11 ವಸಂತಗಳನ್ನು ಪೂರೈಸಿದೆ. ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ಖರ್ಚಿನ ಬಗ್ಗೆ ಚಿಂತಿಸುವ ಪೋಷಕರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಒಂದು ವರದಾನವಾಗಿ ಪರಿಣಮಿಸಿದೆ. ಈ ಯೋಜನೆಯಲ್ಲಿ ಹಣ ಹೇಗೆ ವೃದ್ಧಿಯಾಗುತ್ತದೆ ಎಂಬ ಕುತೂಹಲಕಾರಿ ಲೆಕ್ಕಾಚಾರ ಇಲ್ಲಿದೆ ನೋಡಿ.
72 ಲಕ್ಷ ರೂಪಾಯಿ ಪಡೆಯುವುದು ಹೇಗೆ? (ಲೆಕ್ಕಾಚಾರ)
ಈ ಯೋಜನೆಯಲ್ಲಿ ‘ಚಕ್ರಬಡ್ಡಿ’ಯ ಮ್ಯಾಜಿಕ್ ಅದ್ಭುತವಾಗಿ ಕೆಲಸ ಮಾಡುತ್ತದೆ. ನೀವು ಗರಿಷ್ಠ ಮಿತಿಯಷ್ಟು ಹೂಡಿಕೆ ಮಾಡಿದರೆ ಸಿಗುವ ಲಾಭ ಹೀಗಿದೆ:
- ವಾರ್ಷಿಕ ಹೂಡಿಕೆ: ₹1,50,000
- ಹೂಡಿಕೆ ಅವಧಿ: 15 ವರ್ಷಗಳು
- ಮೆಚ್ಯೂರಿಟಿ ಅವಧಿ: 21 ವರ್ಷಗಳು
- ಪ್ರಸ್ತುತ ಬಡ್ಡಿ ದರ: 8.20%
- ನೀವು ಜಮೆ ಮಾಡುವ ಒಟ್ಟು ಮೊತ್ತ: ₹22,50,000
- ಬಡ್ಡಿಯಿಂದ ಬರುವ ಲಾಭ: ₹49,32,119
- ಒಟ್ಟು ಮೆಚ್ಯೂರಿಟಿ ಮೊತ್ತ: ₹71,82,119
ಇದು ಸಂಪೂರ್ಣ ಸರ್ಕಾರಿ ಖಾತರಿಯ ಯೋಜನೆ ಆಗಿರುವುದರಿಂದ ಇಲ್ಲಿ ಯಾವುದೇ ರಿಸ್ಕ್ ಇರುವುದಿಲ್ಲ. ಪ್ರಸ್ತುತ ಸಣ್ಣ ಉಳಿತಾಯ ಯೋಜನೆಗಳಲ್ಲಿ ಅತ್ಯಧಿಕ ಅಂದರೆ 8.20% ಬಡ್ಡಿ ನೀಡುತ್ತಿರುವುದು ಇದೊಂದೇ ಯೋಜನೆಗೆ. ಇದರೊಂದಿಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ ₹1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯೂ ಸಿಗಲಿದೆ. ಕೇವಲ ₹250 ಪಾವತಿಸುವ ಮೂಲಕವೂ ನೀವು ಈ ಖಾತೆಯನ್ನು ತೆರೆಯಬಹುದು.
ಸೂಚನೆ: ನೀವು ಪೂರ್ಣ ಪ್ರಮಾಣದ ಲಾಭವನ್ನು (ರೂ. 71.8 ಲಕ್ಷ) ಪಡೆಯಬೇಕೆಂದರೆ, ಪ್ರತಿ ವರ್ಷ ಏಪ್ರಿಲ್ 1 ರಿಂದ 5 ರ ಒಳಗಾಗಿ ಹಣವನ್ನು ಡಿಪಾಸಿಟ್ ಮಾಡುವುದು ಉತ್ತಮ. ಇದು ಹೆಚ್ಚಿನ ಬಡ್ಡಿ ಗಳಿಸಲು ಸಹಕಾರಿ.
ನೆನಪಿರಲಿ ಈ ನಿಯಮಗಳು:
- ಮಗು ಹುಟ್ಟಿದಂದಿನಿಂದ 10 ವರ್ಷ ತುಂಬುವ ಮೊದಲು ಯಾವಾಗ ಬೇಕಾದರೂ ಖಾತೆ ತೆರೆಯಬಹುದು.
- ಒಬ್ಬ ಪೋಷಕರು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಪಡೆಯಬಹುದು.
- ಖಾತೆ ತೆರೆದ 21 ವರ್ಷಗಳ ನಂತರ ಪೂರ್ಣ ಹಣವನ್ನು ಪಡೆಯಬಹುದು.
- ಆದರೆ, ಮಗಳಿಗೆ 18 ವರ್ಷ ತುಂಬಿದ ನಂತರ ಉನ್ನತ ಶಿಕ್ಷಣಕ್ಕಾಗಿ ಖಾತೆಯಲ್ಲಿರುವ ಒಟ್ಟು ಮೊತ್ತದ 50% ಹಣವನ್ನು ಹಿಂಪಡೆಯುವ ಅವಕಾಶವಿದೆ.

