HomeKarnatakaBIG NEWS: 1 ಕೋಟಿ ರೂಪಾಯಿ ಲಂಚ ಪಡೆದ ಆರೋಪ: ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿ ವಿರುದ್ಧ...

BIG NEWS: 1 ಕೋಟಿ ರೂಪಾಯಿ ಲಂಚ ಪಡೆದ ಆರೋಪ: ಜಿಎಸ್‌ಟಿ ಇಂಟೆಲಿಜೆನ್ಸ್ ಅಧಿಕಾರಿ ವಿರುದ್ಧ ಸಿಬಿಐಯಿಂದ FIR ದಾಖಲು

ಬೆಂಗಳೂರು: ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (DGGI) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದ್ದು, ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ.

ಜಿಎಸ್ ಟಿ ಅಧಿಕಾರಿ 21 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಮೈಸೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನ ಕೇಂದ್ರ ಜಿಎಸ್‌ಟಿ ಘಟಕದ ಸೀನಿಯರ್ ಇಂಟೆಲಿಜೆನ್ಸ್ ಆಫೀಸರ್ ಪ್ರವೀಣ್ ಕುಮಾರ್ ಯಾದವ್ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ಮೈಸೂರಿನ ಗುಜರಿ ಉದ್ಯಮಿ ಮೊಹಮ್ಮದ್ ಕಮ್ರಾನ್ (24) ಎಂಬುವವರಿಂದ 2025ರಲ್ಲಿ 1 ಕೋಟಿ ರೂ. ಲಂಚ ಪಡೆದಿದ್ದರು ಎನ್ನಲಾಗಿದೆ. ಎಫ್‌ಐಆರ್ ಪ್ರಕಾರ, 2025ರ ಸೆಪ್ಟೆಂಬರ್ 10ರಂದು ಉದ್ಯಮಿ ಕಮ್ರಾನ್ ಮನೆಯ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ ಪ್ರವೀಣ್ ಕುಮಾರ್ ಯಾದವ್ ಪ್ರಕರಣದಿಂದ ಪಾರು ಮಾಡಲು 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದೇ ದಿನ ರಾತ್ರಿ 9:30 ರ ಸುಮಾರಿಗೆ ವಾಟ್ಸಾಪ್ ಮೂಲಕ ಲೊಕೇಶನ್ ಕಳುಹಿಸಿ, ಮೈಸೂರಿನ ಪಾರ್ಕ್‌ಲೇನ್ ಹೋಟೆಲ್ ಬಳಿ ಹಣ ತರುವಂತೆ ಸೂಚಿಸಿದ್ದರು. ಕಮ್ರಾನ್ ತನ್ನ ಸ್ನೇಹಿತನೊಂದಿಗೆ ಹೋಗಿ 1 ಕೋಟಿ ರೂ. ನಗದು ಇದ್ದ ಬಾಕ್ಸ್ ಅನ್ನು ಅಧಿಕಾರಿಗೆ ಹಸ್ತಾಂತರಿಸಿದ್ದರು. ಆದರೆ, ಮರುದಿನವೇ ಪ್ರವೀಣ್ ಯಾದವ್ ಮತ್ತೊಮ್ಮೆ ವಾಟ್ಸಾಪ್ ಕರೆ ಮಾಡಿ, ಕೇಸ್ ಕ್ಲೋಸ್ ಮಾಡಲು ಹೆಚ್ಚುವರಿಯಾಗಿ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಕಮ್ರಾನ್ ದೂರಿನಲ್ಲಿ ತಿಳಿಸಿದ್ದಾರೆ.

ಲಂಚದ ಪ್ರಕರಣದ ಬಗ್ಗೆ ಡಿಜಿಜಿಐ ನಡೆಸಿದ ಆಂತರಿಕ ಪ್ರಾಥಮಿಕ ತನಿಖೆಯಲ್ಲಿ ಪ್ರವೀಣ್ ಯಾದವ್ ಉದ್ಯಮಿ ಜೊತೆ ಸಂಪರ್ಕದಲ್ಲಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ಮುಚ್ಚಿಟ್ಟಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2025 ರಲ್ಲೇ ಸಿಬಿಐಗೆ ದೂರು ನೀಡಲಾಗಿತ್ತು. ಆದರೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆ ನಡೆಸಲು ಕರ್ನಾಟಕ ಸರ್ಕಾರ 2026ರ ಮಾರ್ಚ್ 6 ರಂದು ಮತ್ತು ಕೇಂದ್ರ ಸರ್ಕಾರ ಜೂನ್ 8 ರಂದು ಅಧಿಕೃತ ಒಪ್ಪಿಗೆ ನೀಡಿದ ಕಾರಣ ಕಳೆದ ವಾರ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಇದೇ ವೇಳೆ ಸುಳ್ಳು ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ 21 ಕೋಟಿ ರೂ. ಜಿಎಸ್‌ಟಿ ವಂಚಿಸಿದ ಆರೋಪದ ಮೇಲೆ 2025 ಸೆಪ್ಟೆಂಬರ್ 16 ರಂದು ಉದ್ಯಮಿ ಕಮ್ರಾನ್‌ನನ್ನು ಬಂಧಿಸಲಾಗಿತ್ತು. ತನ್ನ ಬಂಧನ ಕಾನೂನುಬಾಹಿರ ಎಂದು ಕಮ್ರಾನ್ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ಜುಲೈ 7 ರಂದು ಕರ್ನಾಟಕ ಹೈಕೋರ್ಟ್ ಆತನ ಬಂಧನ ಸೂಕ್ತವಾಗಿದೆ ಎಂದು ಆದೇಶಿಸಿದೆ. ಹೈಕೋರ್ಟ್ ತೀರ್ಪು ಬೆನ್ನಲ್ಲೇ ಸಿಬಿಐ ಭ್ರಷ್ಟ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular