ಬೆಂಗಳೂರು: ಬೆಂಗಳೂರು ಹೊರವಲಯದ ಉಪನಗರಗಳು ಮತ್ತು ಇತರೆ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಗಾಗಿ ಜಲಮಂಡಳಿ ರೂಪಿಸಿದ ಕಾವೇರಿ ಆರನೇ ಹಂತದ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕಾವೇರಿ ಆರನೇ ಹಂತದ ಯೋಜನೆಯಡಿ ಹಂಚಿಕೆಯಾಗಿರುವ 6 ಟಿಎಂಸಿ ನೀರಿನಲ್ಲಿ 4 ಟಿಎಂಸಿಯನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ಶಿವರಾಮ ಕಾರಂತ ಬಡಾವಣೆ ಸೇರಿದಂತೆ ಇತರೆ ಪ್ರಮುಖ ಬಡಾವಣೆಗಳಿಗೆ ಹಾಗೂ ಎರಡು ಟಿಎಂಸಿ ನೀರನ್ನು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಗನುಗುಣವಾಗಿ ದೇವನಹಳ್ಳಿ, ಹೊಸಕೋಟೆ, ಹುಣಸಮಾರನಹಳ್ಳಿ, ಮಾದನಾಯಕನಹಳ್ಳಿ, ನೆಲಮಂಗಲ, ಚಿಕ್ಕಬಾಣಾವರ, ವಿಜಯಪುರ ಸೇರಿ ಇತರೆ ಪ್ರದೇಶಗಳಿಗೆ ನೀರು ಪೂರೈಸಲಾಗುವುದು.
ಈ ಯೋಜನೆಗಾಗಿ 6939 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಅದರಲ್ಲಿ ಯೋಜನಾ ವೆಚ್ಚ 5177 ಕೋಟಿ ರೂ. ಹಾಗೂ ಯೋಜನೆಗೆ ಅಗತ್ಯವಿರುವ 130 ಎಕರೆ ಭೂಮಿ ಸ್ವಾಧೀನಕ್ಕೆ 1822 ಕೋಟಿ ರೂ. ವ್ಯಯಿಸಲಾಗುವುದು. ಯೋಜನೆಗೆ ಅಗತ್ಯವಿರುವ ಹಣವನ್ನು ಜಲ ಮಂಡಳಿಯು ವಿಶ್ವಬ್ಯಾಂಕ್ ಸೇರಿ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಪಡೆಯಲಿದೆ.

