HomeKarnatakaಕಾವೇರಿ ವಿವಾದ: ರಾಜ್ಯ ಸರ್ಕಾರದ ಮೃದು ಧೋರಣೆಯೇ ಕಾನೂನು ಹೋರಾಟದ ವೈಫಲ್ಯಕ್ಕೆ ಕಾರಣ; ಕೂಡಲೇ ಸುಪ್ರೀಂ...

ಕಾವೇರಿ ವಿವಾದ: ರಾಜ್ಯ ಸರ್ಕಾರದ ಮೃದು ಧೋರಣೆಯೇ ಕಾನೂನು ಹೋರಾಟದ ವೈಫಲ್ಯಕ್ಕೆ ಕಾರಣ; ಕೂಡಲೇ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ರಾಜ್ಯದ ಸ್ಥಿತಿ ಮನವರಿಕೆ ಮಾಡಿ: ಆರ್.ಅಶೋಕ್ ಆಗ್ರಹ

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್​.ಅಶೋಕ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

CWMA ಆದೇಶಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 6,000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿರುವುದು ಕರ್ನಾಟಕದ ಹಿತಾಸಕ್ತಿಗೆ ಹೊಡೆದ ಬಲವಾದ ಪೆಟ್ಟು. ನಮ್ಮ ರಾಜ್ಯದ ವಾದಕ್ಕೆ ಪ್ರಾಧಿಕಾರದಲ್ಲಿ ಸೂಕ್ತ ಬೆಲೆ ಸಿಗದಿರಲು ರಾಜ್ಯ ಸರ್ಕಾರದ ಮೃದು ಧೋರಣೆ ಮತ್ತು ಕಾನೂನು ಹೋರಾಟದ ಸಂಪೂರ್ಣ ವೈಫಲ್ಯವೇ ಕಾರಣ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳುನಾಡು ಸರ್ಕಾರವು ಪ್ರಾಧಿಕಾರದ ಸಭೆಯಲ್ಲಿ ನಿತ್ಯ ಬರೋಬ್ಬರಿ 20,000 ಕ್ಯೂಸೆಕ್ ನೀರಿಗಾಗಿ ಪಟ್ಟು ಹಿಡಿದಾಗ, ಅದನ್ನು ದೃಢವಾಗಿ ವಿರೋಧಿಸಿ ಸಂಪೂರ್ಣ ನೀರು ಬಿಡುಗಡೆಯನ್ನು ತಡೆಯಲು ಈ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮ್ಮ ಜಲಾಶಯಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗ, ಮಳೆ ಅಭಾವದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಿ ಈಗ ಮತ್ತೆ 15 ದಿನಗಳಲ್ಲಿ 7.77 TMC ನೀರು ಹರಿಸಲು ಒಪ್ಪಿಕೊಂಡು ಬಂದಿರುವುದು ಕನ್ನಡಿಗರಿಗೆ ಎಸಗಿದ ಮಹಾದ್ರೋಹ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರು ಈ ವೈಫಲ್ಯದ ಹೊಣೆ ಹೊತ್ತು ರಾಜ್ಯದ ಜನರಿಗೆ ಉತ್ತರ ನೀಡಬೇಕು. ಪ್ರಾಧಿಕಾರದ ಮುಂದೆ ಕರ್ನಾಟಕದ ಪರ ಯಾವ ಅಂಶಗಳನ್ನು ಮಂಡಿಸಲಾಯಿತು? ರಾಜ್ಯದ ಜಲಾಶಯಗಳ ನೈಜ ಸ್ಥಿತಿಯ ವರದಿಯನ್ನು ಸಲ್ಲಿಸಲಾಗಿತ್ತೇ? ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದರೆ ಬೆಂಗಳೂರಿನ ಕುಡಿಯುವ ನೀರು ಮತ್ತು ಕರ್ನಾಟಕದ ರೈತರ ಮೇಲೆ ಆಗುವ ಪರಿಣಾಮವನ್ನು ಸಮರ್ಪಕವಾಗಿ ವಿವರಿಸಲಾಗಿತ್ತೇ? ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಹಾಗೂ ರೈತರ ಬೆಳೆಗಳಿಗೆ ಬೇಕಾದ ನೀರನ್ನು ಪರಿಗಣಿಸಿ ನೀರಿನ ಕೊರತೆಯ ವಾಸ್ತವಾಂಶವನ್ನು ಏಕೆ ಮನವರಿಕೆ ಮಾಡಿಕೊಡಲಿಲ್ಲ? ರಾಜ್ಯದ ಪರ ವಾದ ಮಂಡಿಸಿದ ತಾಂತ್ರಿಕ ಮತ್ತು ಕಾನೂನು ತಂಡದ ಕಾರ್ಯವೈಖರಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಗುಡುಗಿದರು.

ಮೇಲ್ಮನವಿ ಸಲ್ಲಿಸುವ ಆಲೋಚನೆ ಇದೆ ಎಂದು ದಿನಕ್ಕೊಂದು ನೆಪ ಹೇಳಿ ಕಾಲಹರಣ ಮಾಡುವ ಬದಲು, ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು​ ಆಗ್ರಹಿಸಿದರು.

ನಾವು ಸಂಕಷ್ಟದಲ್ಲಿರುವಾಗ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಅಸಾಧ್ಯ. 15 ದಿನ 6 ಸಾವಿರ ಕ್ಯೂಸೆಕ್ ಎಂದರೆ 7.5 ಟಿಎಂಸಿ ಆಗುತ್ತದೆ. ಈ ನಿಟ್ಟಿನಲ್ಲಿ ತಕ್ಷಣ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ರಾಜ್ಯದ ಸಂಕಷ್ಟ ಹಾಗೂ ಕಾವೇರಿ ಕೊಳ್ಳದಲ್ಲಿ ನೀರಿಲ್ಲದ ವಾಸ್ತವ ಸ್ಥಿತಿ ಮನವರಿಕೆ ಮಾಡಬೇಕು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular