ಬೆಂಗಳೂರು: ಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಆರೋಪದಡಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗರ್ಭಿಣಿಯೊಬ್ಬರು ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಬೆಳ್ಳಂದೂರಿನ ಮಹಿಳೆ ನೀಡಿದ ದೂರಿನ ಅನ್ವಯ ಆರೋಪಿ ಕೃಷ್ಣರಾಮ ಪಂಗಿಂಗ್ ಮತ್ತು ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೇ 21ರಂದು ಮಧ್ಯಾಹ್ನ 12:30 ಸುಮಾರಿಗೆ ಮಹಿಳೆ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಮೂರನೇ ಮಹಡಿಯಲ್ಲಿರುವ ಶೌಚಾಲಯ ಬಳಸುವಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಅನುಮಾನಾಸ್ಪದವಾಗಿ ವರ್ತಿಸಿ ಮೊಬೈಲ್ ಮೂಲಕ ಫೋಟೋ ವಿಡಿಯೋ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಆತ ಶೌಚಾಲಯದೊಳಗೆ ನನ್ನ ಫೋಟೋ ವಿಡಿಯೋ ತೆಗೆದಿರಬಹುದು ಎಂಬ ಗಂಭೀರ ಅನುಮಾನ ಉಂಟಾಗಿ ಆತನನ್ನು ಪ್ರಶ್ನಿಸಿದಾಗ ಅಲ್ಲಿಂದ ಓಡಿ ಹೋಗಿದ್ದಾನೆ.
ಆಸ್ಪತ್ರೆ ಆಡಳಿತ ಮಂಡಳಿಯವರಿಗೆ ದೂರು ನೀಡಿ ಆತನ ಮೊಬೈಲ್ ಪರಿಶೀಲಿಸುವಂತೆ ವಿನಂತಿಸಿದೆ. ಆಸ್ಪತ್ರೆ ಸಿಬ್ಬಂದಿ ನನ್ನಿಂದ ಆತನನ್ನು ದೂರ ಇಟ್ಟು ವಿಚಾರಣೆ ನಡೆಸಿದ್ದು, 15 ನಿಮಿಷಗಳ ನಂತರ ಮೊಬೈಲ್ ತೋರಿಸಿದ್ದಾರೆ. ಮೊಬೈಲ್ ಪರಿಶೀಲಿಸಿದಾಗ ಫೋಟೋ, ವಿಡಿಯೋಗಳು ಇದ್ದ ಫೋಲ್ಡರ್ ಲಾಕ್ ಮಾಡಿರುವುದು ಕಂಡು ಬಂದಿದೆ. ತಾನು ಗರ್ಭಿಣಿಯಾಗಿರುವುದರಿಂದ ಈ ಘಟನೆ ತೀವ್ರ ಮಾನಸಿಕ ಒತ್ತಡ, ಭಯ, ಅವಮಾನ ಉಂಟು ಮಾಡಿದ್ದು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

