ಮಂಡ್ಯ: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ತಡೆದು 26 ಲಕ್ಷ ರೂ. ದರೋಡೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಹೊರವಲಯದಲ್ಲಿ ನಡೆದಿದೆ.
ಖಾಸಗಿ ಕಂಪನಿಯ ಉದ್ಯೋಗಿಯ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ದರೋಡೆ ನಡೆಸಿದೆ. ಮೈಸೂರು ಖಾಸಗಿ ಕಂಪನಿಯ ಉದ್ಯೋಗಿ ಗೋವಿಂದರಾಜು ಐ20 ಕಾರ್ ನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ.
ಅವರು ತಮ್ಮ ಕಂಪನಿಗೆ ಸೇರಿದ ಹಣವನ್ನು ಮೈಸೂರಿನಿಂದ ಬೆಂಗಳೂರಿಗೆ ತೆಗೆದುಕೊಂಡು ತೆರಳುತ್ತಿದ್ದರು. ಮದ್ದೂರು ಹೊರವಲಯದ ಐಶ್ವರ್ಯ ಕಾನ್ವೆಂಟ್ ಸಮೀಪ ಇನೋವಾ ಕಾರ್ ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಗೋವಿಂದರಾಜು ಅವರ ಕಾರ್ ಅಡ್ಡಗಟ್ಟಿದ್ದಾರೆ. ಕಾರಿನ ಗಾಜು ಒಡೆದು ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾರೆ. ಬಳಿಕ 26 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.
ಕೂಡಲೇ ಗೋವಿಂದರಾಜು ಮದ್ದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ವೃತ್ತ ನಿರೀಕ್ಷಕ ನವೀನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಡಾ. ಶೋಭಾರಾಣಿ ಮಾರ್ಗದರ್ಶನದಲ್ಲಿ ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

