ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಸಮೀಪ ನಡೆದಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಸಮೀಪ ಅಪಘಾತ ಸಂಭವಿಸಿದ್ದು, ಸಿದ್ದಾರ್ಥ್(27), ಹಸನ್ಮುಖಿ(29) ಯಶೋದಾಬಾಯಿ(51) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೌಂದರ್ಯ(26), ಸಿಂಧು(24) ಮತ್ತು ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದಾವಣಗೆರೆಯ ಎಸ್ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮೃತರು ದಾವಣಗೆರೆಯ ನಿಟುವಳ್ಳಿಯ ಮೌನೇಶ್ವರ ಬಡಾವಣೆಯ ನಿವಾಸಿಗಳಾಗಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

