2 ನೇ ಪತ್ನಿಗೆ ಜೀವನಾಂಶ ನೀಡುವುದನ್ನು ಪತಿ ನಿರಾಕರಿಸುವಂತಿಲ್ಲ; ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಮೊದಲ ಪತ್ನಿ ಬದುಕಿದ್ದಾಗಲೇ ಕಾನೂನುಬದ್ಧವಾಗಿ ಎರಡನೇ ಪತ್ನಿಯನ್ನು ಮದುವೆಯಾದ ವ್ಯಕ್ತಿ, ಆಕೆಗೆ ಜೀವನಾಂಶ ನೀಡುವುದನ್ನ ನಿರಾಕರಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಎರಡನೇ ಪತ್ನಿಯ ಜೀವನಾಂಶಕ್ಕಾಗಿ ಪ್ರತಿ ತಿಂಗಳು 2500 ರೂಪಾಯಿ ಜೀವನಾಂಶ ನೀಡುವ ನಿರ್ಧಾರವನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, ಅಷ್ಟೇ ಅಲ್ಲದೇ ಜೀವನಾಂಶ ಹೆಚ್ಚಳ ಕೋರಿ ಮರು ಅರ್ಜಿ ಸಲ್ಲಿಸುವಂತೆ ಕೋರ್ಟ್ ಮಹಿಳೆಗೆ ಅನುಮತಿ ನೀಡಿದೆ.

ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರ ಹೈಕೋರ್ಟ್ ಏಕಸದಸ್ಯ ಪೀಠ, ಡಿಸೆಂಬರ್ 14 ರಂದು ಪತ್ನಿಗೆ ಜೀವನಾಂಶಕ್ಕಾಗಿ ಮೀಸಲಾದ ಕಾನೂನು ನಿಬಂಧನೆಗಳ ಅಡಿಯಲ್ಲಿ ಮಾಸಿಕ 2,500 ರೂ.ಗಳ ನಿರ್ವಹಣೆಗಾಗಿ ಮ್ಯಾಜಿಸ್ಟ್ರೇಟ್ ನೀಡಿದ 2015 ರ ಆದೇಶವನ್ನು ಎತ್ತಿಹಿಡಿದಿದೆ. ಜೀವನ ನಿರ್ವಹಣೆ ಮೊತ್ತವನ್ನು ಹೆಚ್ಚಿಸಲು ಮಹಿಳೆಗೆ ಹೊಸ ಮನವಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 125 ಪ್ರಕಾರ ತನ್ನ ಜೀವನ ನಿರ್ವಹಣೆ ನೋಡಿಕೊಳ್ಳಲು ಸಾಧ್ಯವಾಗದ ಹೆಂಡತಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

1999 ರ ಸುಪ್ರೀಂ ಕೋರ್ಟ್ ತೀರ್ಪಿನ್ನ ಉಲ್ಲೇಖಿಸಿರುವ ಬಾಂಬೆ ಹೈಕೋರ್ಟ್, ಸೆಕ್ಷನ್ 125 ರ ಅಡಿಯಲ್ಲಿ ಮದುವೆಯ ಪುರಾವೆಯ ಮಾನದಂಡವು ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ರ ಅಡಿಯಲ್ಲಿರುವ ಅಪರಾಧದ ವಿಚಾರಣೆಯಲ್ಲಿ ಅಗತ್ಯವಿರುವಷ್ಟು ಕಠಿಣವಾಗಿಲ್ಲ ಎಂದಿದೆ.

ಈ ಪ್ರಕರಣದ ಬಗ್ಗೆ ಗಮನಿಸುವುದಾದರೆ, 2012 ರಲ್ಲಿ ಮಹಿಳೆ ನಾಸಿಕ್ ಜಿಲ್ಲೆಯ ಯೋಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದಳು. ಮಹಿಳೆಯ ಮನವಿಯ ಮೇರೆಗೆ ಮಾಸಿಕ 2,500 ಜೀವನ ನಿರ್ವಹಣೆ ಭತ್ಯೆ ನೀಡಬೇಕೆಂದು ಕೋರ್ಟ್ 2015ರಲ್ಲಿ ಆದೇಶಿಸಿತು. ಈ ವೇಳೆ ಪತಿಯ ಆದಾಯ ಮಾಸಿಕ 50,000-ರೂ ನಿಂದ 60,000 ರೂ. ವರೆಗೆ ಇತ್ತು. ಇದನ್ನು ವಿರೋಧಿಸಿ ನಿಫಾಡ್‌ನಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಪತಿ ಮೇಲ್ಮನವಿ ಸಲ್ಲಿಸಿ ನಾನು ಆಕೆಯನ್ನು ಮದುವೆಯಾಗಿಲ್ಲ ಎಂದು ವಾದಿಸಿದ್ದನು.

ಏಪ್ರಿಲ್ 2022 ರಲ್ಲಿ, ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸಿತು. ಇದಾದ ಬಳಿಕ ಮಹಿಳೆ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಾನು 1989ರಲ್ಲಿ ಆ ವ್ಯಕ್ತಿಯನ್ನು ಮದುವೆಯಾಗಿ 1991ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಅವರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು. ತನ್ನನ್ನು ಮದುವೆಯಾದ ಎರಡು ವರ್ಷಗಳ ನಂತರ ಬಿಟ್ಟುಹೋಗಿದ್ದ ಆತನ ಮೊದಲ ಪತ್ನಿ ಮಧ್ಯವರ್ತಿಗಳ ಮಧ್ಯಸ್ಥಿಕೆಯಿಂದ ಮತ್ತು ತನ್ನ ಸ್ವಂತ ಒಪ್ಪಿಗೆಯಿಂದ ಪತಿಯೊಂದಿಗೆ ಸಹಬಾಳ್ವೆ ನಡೆಸಲು ಪ್ರಾರಂಭಿಸಿದಳು. ನಂತರ ಆಕೆ ಮಗುವಿಗೆ ಜನ್ಮ ನೀಡಿದಳು ಎಂದು ಅವರು ಹೇಳಿದ್ದರು. ಇದಾದ ಬಳಿಕ ಎರಡನೇ ಪತ್ನಿ ಮತ್ತೊಂದು ಮಗುವಿಗೆ ಜನ್ಮ ನೀಡಿದಳು. ಆಕೆ ತನ್ನ ಮಕ್ಕಳ ಶಾಲೆಯ ದಾಖಲೆಗಳಲ್ಲಿ ಆ ವ್ಯಕ್ತಿಯ ಹೆಸರನ್ನು ತಂದೆ ಎಂದು ಉಲ್ಲೇಖಿಸಿದ್ದಾರೆ.

ತನ್ನ ಎರಡನೇ ಮಗ ಹುಟ್ಟಿದ ಕೂಡಲೇ ಸಮಸ್ಯೆಗಳು ಉದ್ಭವಿಸಿ ಪ್ರತ್ಯೇಕವಾಗಿ ವಾಸಿಸಲು ಎರಡನೇ ಹೆಂಡತಿ ಪ್ರಾರಂಭಿಸಿದಳು. ಈ ವೇಳೆ 2011 ರವರೆಗೆ ಜೀವನಾಂಶವನ್ನು ಪಡೆದಿದ್ದರು. ಆದರೆ ಬಳಿಕ ಮೊದಲ ಹೆಂಡತಿಯ ಮಾತು ಕೇಳಿ ಜೀವನಾಂಶ ನೀಡುವುದನ್ನ ಪತಿ ನಿಲ್ಲಿಸಿದ್ದರು. ಇದೆಲ್ಲವನ್ನೂ ಗಮನಿಸಿ, ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದು ಕಳೆದ ಒಂಬತ್ತು ವರ್ಷಗಳ ಬಾಕಿಯನ್ನು ಪಾವತಿಸಲು ಪತಿಗೆ ಎರಡು ತಿಂಗಳ ಕಾಲಾವಕಾಶ ನೀಡಿದೆ. ಜೊತೆಗೆ ಜೀವನಾಂಶ ಮೊತ್ತವನ್ನು ಹೆಚ್ಚಿಸಲು ಮಹಿಳೆಗೆ ಹೊಸ ಮನವಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read