ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಏಟಿಎಂ ವಹಿವಾಟಿನ ಶುಲ್ಕವನ್ನು ಹೆಚ್ಚಿಸುವುದರ ಜೊತೆಗೆ, ತಿಂಗಳಿಗೆ ಲಭ್ಯವಿರುವ ಉಚಿತ ಏಟಿಎಂ ವಹಿವಾಟುಗಳ ಮಿತಿಯನ್ನೂ ಕಡಿಮೆ ಮಾಡಿದೆ. ಅಲ್ಲದೆ, ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೂ ಹಣ ಹಿಂಪಡೆಯಲು ಪ್ರಯತ್ನಿಸಿದರೆ ದಂಡ ಶುಲ್ಕ ವಿಧಿಸುವುದಾಗಿ ತಿಳಿಸಿದೆ.
ಸೆಪ್ಟೆಂಬರ್ 1ರಿಂದಲೇ ಹೊಸ ಶುಲ್ಕ ಜಾರಿ
ಕೆನರಾ ಬ್ಯಾಂಕ್ ಈ ಹೊಸ ಶುಲ್ಕಗಳನ್ನು ಸೆಪ್ಟೆಂಬರ್ 1ರಿಂದಲೇ ಜಾರಿಗೆ ತಂದಿದೆ. ಗ್ರಾಹಕರು ಇದನ್ನು ಗಮನದಲ್ಲಿಟ್ಟುಕೊಂಡು ತಮ್ಮ ಏಟಿಎಂ ವಹಿವಾಟುಗಳನ್ನು ನಿರ್ವಹಿಸುವಂತೆ ಬ್ಯಾಂಕ್ ಸೂಚಿಸಿದೆ. ಈಗಾಗಲೇ ಹಲವು ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಏಟಿಎಂ ಉಚಿತ ವಹಿವಾಟಿನ ಮಿತಿಯನ್ನು ಕಡಿಮೆ ಮಾಡುತ್ತಿರುವ ಬೆನ್ನಲ್ಲೇ ಕೆನರಾ ಬ್ಯಾಂಕ್ ಕೂಡ ಈ ನಿರ್ಧಾರ ಕೈಗೊಂಡಿದೆ.
ಉಚಿತ ಏಟಿಎಂ ವಹಿವಾಟು 6ರಿಂದ 5ಕ್ಕೆ ಇಳಿಕೆ
ಈವರೆಗೆ ಕೆನರಾ ಬ್ಯಾಂಕ್‌ನ ಏಟಿಎಂನಲ್ಲಿ ತಿಂಗಳಿಗೆ 6 ಉಚಿತ ವಹಿವಾಟುಗಳಿಗೆ ಅವಕಾಶವಿತ್ತು. ಇದೀಗ ಅದನ್ನು 5ಕ್ಕೆ ಇಳಿಸಲಾಗಿದೆ. ಅಂದರೆ, ತಿಂಗಳಿಗೆ ಐದು ವಹಿವಾಟುಗಳನ್ನು ಮಾತ್ರ ಉಚಿತವಾಗಿ ಮಾಡಬಹುದು. ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಬ್ಯಾಲೆನ್ಸ್ ಪರಿಶೀಲನೆ, ಮಿನಿ ಸ್ಟೇಟ್‌ಮೆಂಟ್ ಪಡೆಯುವಂತಹ ಸೇವೆಗಳನ್ನೂ ಉಚಿತ ವಹಿವಾಟಿನ ಮಿತಿಯಲ್ಲೇ ಸೇರಿಸಲಾಗಿದೆ. ಉಚಿತ ವಹಿವಾಟಿನ ಮಿತಿ ಮುಗಿದ ಬಳಿಕ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೂ ಹಣ ಹಿಂಪಡೆಯಲು ಪ್ರಯತ್ನಿಸಿದರೆ ₹23 + ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ.
ಪ್ರತಿ ಹೆಚ್ಚುವರಿ ವಹಿವಾಟಿಗೆ ₹23 + ಜಿಎಸ್‌ಟಿ
ಉಚಿತ ವಹಿವಾಟಿನ ಮಿತಿ ಮೀರಿದ ನಂತರ ಏಟಿಎಂನಲ್ಲಿ ನಡೆಸುವ ಪ್ರತಿ ವಹಿವಾಟಿಗೆ ₹23 + ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಈ ಶುಲ್ಕ ₹20 ಆಗಿತ್ತು. ಇದೀಗ ₹3 ಹೆಚ್ಚಿಸಲಾಗಿದೆ.
ಆದರೆ ಹಿರಿಯ ನಾಗರಿಕರಿಗೆ ತಿಂಗಳಿಗೆ 8 ಉಚಿತ ಏಟಿಎಂ ವಹಿವಾಟುಗಳಿಗೆ ಅವಕಾಶ ಮುಂದುವರಿಸಲಾಗಿದೆ. ಈ ಮಿತಿಯನ್ನು ಮೀರಿದ ಬಳಿಕ ಪ್ರತಿ ವಹಿವಾಟಿಗೆ ₹5 + ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಹಿರಿಯ ನಾಗರಿಕರ ಉಚಿತ ವಹಿವಾಟಿನ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇತರ ಬ್ಯಾಂಕ್ ಏಟಿಎಂನಲ್ಲಿ 3 ವಹಿವಾಟು ಉಚಿತ
ಇನ್ನು ಮೆಟ್ರೋ ನಗರಗಳಲ್ಲಿರುವ ಕೆನರಾ ಬ್ಯಾಂಕ್ ಏಟಿಎಂನಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳನ್ನು ಮಾಡಬಹುದು. ಇತರ ಬ್ಯಾಂಕ್‌ಗಳ ಏಟಿಎಂನಲ್ಲಿ ತಿಂಗಳಿಗೆ 3 ವಹಿವಾಟುಗಳು ಉಚಿತವಾಗಿರುತ್ತವೆ.
ಇದೇ ವೇಳೆ, ಕೆನರಾ ಬ್ಯಾಂಕ್‌ನ ಪ್ಲಾಟಿನಂ, ಬಿಸಿನೆಸ್ ಮತ್ತು ಸೆಲೆಕ್ಟ್ ಕಾರ್ಡ್‌ಗಳಿಗೆ ಗ್ರೀನ್ ಪಿನ್ ಜನರೇಟ್ ಮಾಡಿಕೊಳ್ಳಲು ಈ ಹಿಂದೆ ₹23 ಶುಲ್ಕ ವಿಧಿಸಲಾಗುತ್ತಿತ್ತು. ಇದೀಗ ಈ ಶುಲ್ಕವನ್ನು ₹5ಕ್ಕೆ ಇಳಿಸಲಾಗಿದೆ.

