ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಹುದಿನಗಳಿಂದ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟ ತಲುಪಿದೆ. ನವದೆಹಲಿಯಲ್ಲಿ ಮಂಗಳವಾರ ತಡರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ನಡೆದ ಸುದೀರ್ಘ ಹೈವೋಲ್ಟೇಜ್ ಸಭೆಯಲ್ಲಿ ಸಂಭವನೀಯ ಸಚಿವರ ಪಟ್ಟಿ ಸಿದ್ಧಗೊಂಡಿದ್ದು, ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವುದು ಮಾತ್ರ ಬಾಕಿಯಿದೆ.
ಇಂದು ಖರ್ಗೆ ನಿವಾಸದಲ್ಲಿ ಫೈನಲ್ ಮೀಟಿಂಗ್
ಮಂಗಳವಾರ ನಡೆದ ಸಭೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಜರಿರಲಿಲ್ಲ. ಹೀಗಾಗಿ ಸಚಿವರ ಅಂತಿಮ ಪಟ್ಟಿಗೆ ಅನುಮೋದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಂಜೆ 4:30 ರಿಂದ 5:30ರ ವರೆಗೆ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆಸಲು ರಾಹುಲ್ ಗಾಂಧಿ ಸಮಯ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ನಡೆಯಲಿರುವ ಈ ನಿರ್ಣಾಯಕ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪಾಲ್ಗೊಳ್ಳಲಿದ್ದಾರೆ.ರಾಹುಲ್ ಗಾಂಧಿ ಹಾಗೂ ಖರ್ಗೆ ಅವರ ಸಮ್ಮತಿ ಸಿಕ್ಕ ತಕ್ಷಣವೇ ಪಟ್ಟಿ ಅಧಿಕೃತವಾಗಿ ಹೊರಬೀಳಲಿದ್ದು, ಸಿಎಂ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ನಾಳೆ ಸಂಜೆ ರಾಜಭವನದಲ್ಲಿ ಪ್ರಮಾಣವಚನ
ಎಲ್ಲವೂ ಅಂದುಕೊಂಡಂತೆ ನಡೆದರೆ, ಗುರುವಾರ (ಜುಲೈ 30) ಸಂಜೆ 5 ಗಂಟೆಗೆ ರಾಜಭವನದ (ಲೋಕಭವನ) ಗಾಜಿನ ಮನೆಯಲ್ಲಿ 2ನೇ ಹಂತದ ಸಂಪುಟ ಸದಸ್ಯರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯಪಾಲರ ಕಚೇರಿಗೆ ಮೌಖಿಕವಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾತಿ, ಪ್ರಾಂತ್ಯ, ಹಿರಿಯರು ಹಾಗೂ ಕಿರಿಯರ ಸಮತೋಲನ ಕಾಯ್ದುಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ. ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದ ಮಾಜಿ ಸಚಿವರಿಗೆ ಈ ಬಾರಿ ಕೊಕ್ ನೀಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ.
ವೇಣುಗೋಪಾಲ್ ಕೋಟಾದಲ್ಲಿ ಜಮೀರ್‌ಗೆ ಕೊನೆ ಕ್ಷಣದ ಚಾನ್ಸ್?
ಮೂಲಗಳ ಪ್ರಕಾರ, ಆರಂಭಿಕ ಪಟ್ಟಿಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಇರಲಿಲ್ಲ. ಆದರೆ ಕೆ.ಸಿ. ವೇಣುಗೋಪಾಲ್ ಅವರ ವಿಶೇಷ ಆಸಕ್ತಿ ಹಾಗೂ ಒತ್ತಡದಿಂದಾಗಿ ಕೊನೆಯ ಕ್ಷಣದಲ್ಲಿ ಜಮೀರ್ ಹೆಸರು ಸೇರ್ಪಡೆಯಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ “ಪಕ್ಷಕ್ಕೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ” ಎಂದು ಜಮೀರ್ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಸಚಿವ ಸ್ಥಾನದ ರೇಸ್‌ನಲ್ಲಿರುವ ಪ್ರಮುಖ ನಾಯಕರ ಪಟ್ಟಿ:
ಸದ್ಯ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿಯಿದ್ದು, ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲಾಗುತ್ತದೆಯೋ ಅಥವಾ ಕೆಲವನ್ನು ಖಾಲಿ ಬಿಡಲಾಗುತ್ತದೆಯೋ ಎಂಬ ಸ್ಪಷ್ಟತೆಯಿಲ್ಲ.
ರೇಸ್‌ನಲ್ಲಿರುವ ಪ್ರಮುಖ ಶಾಸಕರು/ವಿಧಾನಪರಿಷತ್ ಸದಸ್ಯರ ವಿವರ ಇಲ್ಲಿದೆ:
ಅಥಣಿ ಶಾಸಕ ಲಕ್ಷ್ಮಣ ಸವದಿ
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ
ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇ ಗೌಡ
ಆನೇಕಲ್ ಶಾಸಕ ಬಿ. ಶಿವಣ್ಣ
ವಿಜಯನಗರ ಶಾಸಕ ಎಂ ಕೃಷ್ಣಪ್ಪ
ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್
ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ
ಜೇವರ್ಗಿ ಶಾಸಕ ಅಜಯ್ ಸಿಂಗ್
ಪರಿಷತ್ ಸದಸ್ಯ ಸಲೀಂ ಅಹ್ಮದ್
ದಾವಣಗೆರೆ ಉತ್ತರ ಶಾಸಕ ಎಸ್ಎಸ್ ಮಲ್ಲಿಕಾರ್ಜುನ
ಸೊರಬ ಶಾಸಕ ಮಧು ಬಂಗಾರಪ್ಪ
ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ
ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ
ಪರಿಷತ್ ಸದಸ್ಯೆ ಆರತಿ ಕೃಷ್ಣ
ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ
ನರಸಿಂಹರಾಜ ಶಾಸಕ ತನ್ವೀರ್ ಸೇಠ್
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್
ಶಾಂತಿನಗರ ಶಾಸಕ ಎನ್ಎ ಹ್ಯಾರಿಸ್
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ
ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ
ಪರಿಷತ್ ಸದಸ್ಯೆ ಉಮಾಶ್ರೀ

