ಬೆಂಗಳೂರು-ರಸ್ತೆಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಹಣದ ಆಮಿಷವೊಡ್ಡಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್ ನಿವಾಸಿ, ಹಣ್ಣಿನ ವ್ಯಾಪಾರಿ ವಿಜಯ್ ರಾಘವ್ (42) ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು (ಸ್ಕೂಟರ್) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ
ಜುಲೈ 27 ರಂದು ರಾಮಮೂರ್ತಿ ನಗರ ಪ್ರದೇಶದಲ್ಲಿ ಮಹಿಳೆಯೊಬ್ಬರು ರಸ್ತೆಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಆರೋಪಿ ವಿಜಯ್ ರಾಘವ್, ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಅನುಕೂಲಕ್ಕಾಗಿ ಹಣ ನೀಡುವುದಾಗಿ ಹೇಳಿ ಅಶ್ಲೀಲವಾಗಿ ನಿಂದಿಸಿದ್ದಾನೆ.
ಎಚ್ಚೆತ್ತುಕೊಂಡ ಬಲಿಪಶು ಧೈರ್ಯಶಾಳಿಯಾಗಿ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದು ಮಾತ್ರವಲ್ಲದೆ, ತನ್ನ ಮೊಬೈಲ್ ಫೋನ್‌ನಲ್ಲಿ ಆತನ ಕೃತ್ಯವನ್ನು ವಿಡಿಯೋ ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಘಟನೆಯ ಬಳಿಕ ಸಂತ್ರತ ಮಹಿಳೆ ತನಗಾದ ಕಹಿ ಅನುಭವವನ್ನು ವಿವರಿಸಿ, ಆ ವ್ಯಕ್ತಿಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು.
“ಒಬ್ಬ ಮಹಿಳೆಯಾಗಿ, ನಾನು ಯಾವುದೇ ಭಯವಿಲ್ಲದೆ, ವಸ್ತುವಿನಂತೆ ನಡೆಸಿಕೊಳ್ಳಿಸಿಕೊಳ್ಳದೆ ಅಥವಾ ಹಣದ ಪ್ರಸ್ತಾಪಕ್ಕೆ ಗುರಿಯಾಗದೆ ಸ್ವತಂತ್ರವಾಗಿ ರಸ್ತೆಯಲ್ಲಿ ಕ್ಯಾಬ್‌ಗಾಗಿ ಕಾಯಲು ಸಾಧ್ಯವಾಗಬೇಕು. ಆತನ ಮಾತುಗಳು ನನಗೆ ತೀವ್ರ ಆತಂಕ, ಬೆದರಿಕೆ ಹಾಗೂ ಅಸುರಕ್ಷತೆಯ ಭಾವನೆಯನ್ನುಂಟು ಮಾಡಿದ್ದವು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದರು.
ಅಲ್ಲದೆ, ಇಂತಹ ಕಿರುಕುಳದ ಘಟನೆಗಳನ್ನು ಯಾರೂ ನಿರ್ಲಕ್ಷಿಸಬಾರದು ಅಥವಾ ಸಾಮಾನ್ಯ ಎಂದು ಪರಿಗಣಿಸಬಾರದು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರು. ಸಂತ್ರತೆಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಪೊಲೀಸ್ ಕಾರ್ಯಾಚರಣೆ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತು ಸಂತ್ರತೆ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಎಚ್ಚೆತ್ತ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಂಕಿತ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ನಾವು ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

