ಚಿಕ್ಕಮಗಳೂರು: ದ್ವೇಷ ಭಾಷಣ, ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ನಿಟ್ಟಿನಲ್ಲಿ ತನಿಖೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಲು ಹೋದಾಗ ಸಿ.ಟಿ.ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ಸಿ.ಟಿ,ರವಿ ಮನೆಗೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ವಿವಾದಾತ್ಮಕ ಹೇಳಿಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮುಂದಾದರು. ಈ ವೇಳೆ ಸಿ.ಟಿ.ರವಿ ತಾನು ನೋಟಿಸ್ ಸ್ವೀಕರಿಸಲ್ಲ ಎಂದರು. ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ನಿಮ್ಮ ವಿರುದ್ಧ ಕೇಸ್ ದಾಖಲಾಗಿದ್ದು, ವಿಚಾರಣೆಗೆ ಬರಲು ನೋಟಿಸ್ ಜಾರಿಯಾಗಿದೆ ಎಂದು ಪೊಲೀಸರು ವಿವರಿಸಿದರು. ಆದರೆ ಸಿ.ಟಿ.ರವಿ ತಾನು ನೋಟಿಸ್ ಸ್ವೀಕರಿಸಲ್ಲ ಎಂದು ಪೊಲೀಸರಿಗೆ ಗದರಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಮುತ್ತಿಗೆ ಹಾಕಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
ಪೊಲೀಸರು ಸಿ.ಟಿ.ರವಿ ಅವರ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸುತ್ತಿದ್ದಂತೆ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ನೋಟಿಸ್ ಕಿತ್ತೆಸೆದು ಪೊಲೀಸರ ವಿರುದ್ಧ್ ಧಿಕ್ಕಾರ ಕೂಗೀದ್ದಾರೆ. ಸ್ಥಳದಿಂದ ತೆರಳುವಂತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರು ನೋಟಿಸ್ ಜಾರಿಯಾದರೂ ಸ್ವೀಕರಿಸದೇ ಕಾನೂನಿಗೆ ಅವಮಾಅನ ಮಾಡುತ್ತಿದ್ದೀರಿ. ಬೆಂಬಲಿಗರಿಂದ ನಮ್ಮ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಆದಾಗ್ಯೂ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಘೋಷಣೆ ಮುಂದುವರೆಸಿದರು. ಪೊಲೀಸರು ಸಿ.ಟಿ.ರವಿ ನಿವಾಸದಿಂದ ವಾಪಸ್ ಆಗಿರುವ ಘಟನೆ ನಡೆದಿದೆ.
ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಸಿಜೆಪಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ? ಎದೆ ಸೀಳಿದರೆ ಮೂರಕ್ಷರವಿಲ್ಲದ ಮುಲ್ಲಾಗಳು ಪ್ರತಿಭಟನೆಯಲ್ಲಿ ಭಾಗಿಯಾಗುವುದಂತೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳುವುದಂತೆ ಎಂದು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಜಾಮಿಯಾ ಕಮಿಟಿ ಅಧ್ಯಕ್ಷ ಸಿ.ಟಿ.ರವಿ ವಿರುದ್ಧ ದ್ವೇಷ ಭಾಷಣ ಆರೋಪದಡಿ ಪ್ರಕರಣ ದಾಖಲಿಸಿದ್ದರು.

