ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಹಲವಾಅರು ಅನುಮಾನಕ್ಕೆ ಕಾರಣವಾಗಿದೆ. ಈ ನಡುವೆ ಅವರು ಬರೆದಿಟ್ಟಿದ್ದ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಹಲವಾಅರು ಮಾಹಿತಿಗಳು ಲಭ್ಯವಾಗಿವೆ.
ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅವರ ಪರ್ಸನಲ್ ಡೈರಿ ಸಿಕ್ಕಿದೆ ಎನ್ನಲಾಗಿದೆ. ಅದರಲ್ಲಿ ಅವರು ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರು, ಚಿತ್ರರಂಗದ ಅನೇಕರ ಜತೆ ಒಡನಾಟ ಇರುವುದನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಖ್ಯಾತ ನಟಿಯೊಬ್ಬರ ಜತೆ ಸಿ.ಜೆ. ರಾಯ್ ಇದ್ದರೆಂಬ ಬಗ್ಗೆಯೂ ಭಾರಿ ಚರ್ಚೆಯಾಗುತ್ತಿದೆ.
ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಕಚೇರಿಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ರಾಯ್ ಅವರ ಡೈರಿ ಈಗ ಪೊಲೀಸರ ತನಿಖೆಯ ಪ್ರಮುಖ ಭಾಗವಾಗಿದೆ.
ಸಿ.ಜೆ ರಾಯ್ ಅವರಿಗೆ ಪ್ರತಿನಿತ್ಯ ಡೈರಿ ಬರೆಯುವ ಅಭ್ಯಾಸವಿತ್ತು. ಡೈರಿಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಶಾಸಕರು ಮತ್ತು ಒಬ್ಬರು ಮಾಜಿ ಸಂಸದರ ಹೆಸರು ಉಲ್ಲೇಖವಾಗಿದೆ. ವಿಶೇಷವಾಗಿ ಬೆಂಗಳೂರಿನ ಪ್ರಭಾವಿ ಶಾಸಕರು ಮತ್ತು ಕೋಲಾರ ಜಿಲ್ಲೆಯ ಶಾಸಕರ ಜೊತೆಗಿನ ವ್ಯವಹಾರಿಕ ಸಂಬಂಧಗಳ ಬಗ್ಗೆ ಡೈರಿಯಲ್ಲಿದೆ ಎನ್ನಲಾಗಿದೆ.
ಅಲ್ಲದೆ, ಡೈರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಮಾಡೆಲ್ಗಳ ಹೆಸರುಗಳೂ ಉಲ್ಲೇಖವಾಗಿವೆ. ದುಬೈನಲ್ಲಿ ಅವರು ನಡೆಸುತ್ತಿದ್ದ ವ್ಯವಹಾರಗಳು ಮತ್ತು ಅಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕದ ಬಗ್ಗೆಯೂ ರಾಯ್ ಬರೆದಿಟ್ಟಿದ್ದಾರೆ.
ಇನ್ನೊಂದೆಡೆ ಬರಹಗಾರ ಚಂದ್ರಚೂಡ್ ವಿಡಿಯೋ ಬಿಡುಗಡೆ ಮಾಡಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, ಸಿ.ಜೆ ರಾಯ್ ಅವರು ಶೂಟೌಟ್ ಮಾಡಿಕೊಳ್ಳುವಂತಹ ಪರಿಸ್ಥಿತಿ ಏನಿತ್ತು? ಅವರು ದೇಶ ಬಿಟ್ಟು ಹೋಗುವಂತಹ ಅನಿವಾರ್ಯತೆ ಎದುರಾಗಿತ್ತೇ? ದೊಡ್ಡಬಳ್ಳಾಪುರದ ರೆಸಾರ್ಟ್ ಒಂದರಲ್ಲಿ ನಡೆದ ವಿಚಾರಗಳು ಮತ್ತು ಒಬ್ಬರು ಖ್ಯಾತ ನಟಿಯ ಜೊತೆಗಿನ ಅವರ ಲಿಂಕ್ ಬಗ್ಗೆ ತನಿಖೆಯಾಗಬೇಕು. ಅವರ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸ್ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕಿದೆ.

