ಬೆಂಗಳೂರುರು: ದಾವಣೆಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಗಳಿಗೆ ವಿಪಕ್ಷ ಬಿಜೆಪಿ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಟಿಕೆಟ್ ಗೊಂದಲ ಮುಂದುವರೆದಿದ್ದು, ಅಭ್ಯರ್ಥಿಗಳ ಆಯ್ಕೆಯೇ ಕಗ್ಗಂಟಾಗಿದೆ.
ಬಾಗಲಕೋಟೆಯಲ್ಲಿ ಹೆಚ್.ವೈ.ಮೇಟಿ ಕುಟುಂಬಸ್ಥರಿಗೇ ಟಿಕೆಟ್ ಎನ್ನಲಾಗಿದ್ದರೂ ನಾಲ್ವರು ಮಕ್ಕಳ ಪೈಕಿ ಯಾರಿಗೆ ಪಕ್ಷ ಮಣೆ ಹಾಕಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ಗಾಗಿ ಕಾಂಗ್ರೆಸ್ ನಲ್ಲಿ ಭಾರಿ ಪೈಪೋಟಿ ನಡೆಯುತ್ತಿದ್ದು, ಅಭ್ಯರ್ಥಿ ಯಾರಾಗಬಹುದೆಂಬ ಬಗ್ಗೆ ಸ್ವಪಕ್ಷ ನಾಯಕರಿಗೇ ಸ್ಪಷ್ಟತೆ ಸಿಕ್ಕಿಲ್ಲ.
ಬಾಗಲಕೋಟೆ ಉಪಚುನಾವಣೆ ಟಿಕೆಟ್ ವಿಚಾರವಾಗಿ ಹೆಚ್.ವೈ. ಮೇಟಿ ಅವರ ಮಕ್ಕಳ ನಡುವೆಯೇ ದಂಗಲ್ ಶುರುವಾಗಿದೆ. ಈ ಕುಟುಂಬದರೇ ಪಕ್ಕಾ ಕಾಂಗ್ರೆಸ್ ಕ್ಯಾಂಡಿಡೇಟ್ ಎನ್ನಲಾಗಿದ್ದರೂ ಮೇಟಿ ಮಕ್ಕಳ ಪೈಕಿ ಯಾರನ್ನು ಪಕ್ಷ ಆಯ್ಕೆ ಮಾಡಲಿದೆ ಎಂಬ ಗೊಂದಲ ಉದ್ಭವಿಸಿದೆ. ಯಾರಿಗೆ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಮೇಟಿ ಮಕ್ಕಳಿಗೆ ಸಿಎಂ ಸಲಹೆ, ಸೂಚನೆಯನ್ನು ಅದಾಗಲೇ ನೀಡಿದ್ದಾರೆ. ಹೀಗಿದ್ದರೂ ಟಿಕೆಟ್ ಕೊಡದಿದ್ದರೆ ಬಂಡಾಯ ಸ್ಪರ್ಧೆ ಎಂದು ಮೇಟಿಯವರ ಕಿರಿಯ ಪುತ್ರಿ ಮಹಾದೇವಿ ಮೇಟಿ ಹೇಳುತ್ತಿದ್ದಾರೆ.
ಮಲ್ಲಿಕಾರ್ಜುನ ಮೇಟಿ ಅಥವಾ ಉಮೇಶ್ ಮೇಟಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಕೈ ನಾಯಕರು ಚರ್ಚೆ ನಡೆಸಿದ್ದು, ಆ ಪೈಕಿ ಉಮೇಶ್ ಮೇಟಿಗೆ ಬಹುತೇಕ ಟಿಕೆಟ್ ಸಿಗುವ ಸಾಧ್ಯತೆ ಇದೆ. ಒಂದೊಮ್ಮೆ ಹೀಗೇ ಆದಲ್ಲಿ ಮಹಾದೇವಿ ಮೇಟಿ ನಡೆ ಏನು ಎಂಬ ಬಗ್ಗೆಯೂ ಕುತೂಹಲ ಹೆಚ್ಚಿದೆ.
ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ಗಾಗಿ ದೊಡ್ಡ ಪೈಪೋಟಿಯೇ ನಡೆಯುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರೇ ಅಭ್ಯರ್ಥಿ ಆಗಬೇಕು ಎಂದು ಮುಸ್ಲಿಂ ನಾಯಕರು ಪಟ್ಟು ಹಿಡಿದ್ದರೆ, ಮತ್ತೊಂದೆಡೆ ತಮ್ಮ ಪುತ್ರ ಸಮರ್ಥ್ನನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಹಠ ಹಿಡಿದಿದ್ದಾರೆ. ಕಳೆದ ಮೂರು ದಿನಗಳಿಂದ ವಿಧಾನಸಭಾ ಅಧಿವೇಶನಕ್ಕೂ ಹಾಜರಾಗದ ಮಲ್ಲಿಕಾರ್ಜುನ್, ಉಸ್ತುವಾರಿ ಸಮಿತಿ ಸಭೆಗೂ ಗೈರಾಗಿದ್ದಾರೆ. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.

