ಬೆಂಗಳೂರು: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆ ಬೀಳಲಿದೆ.
ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ನಡೆಸಿದ್ದು, ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಿದ್ದಾರೆ. ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಿದ್ದಾರೆ. ಬುಧವಾರ ಸಂಜೆಯವರೆಗೂ ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, ಎರಡೂ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ.
ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ದಂಡು ಸೋಮವಾರ ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ದಾವಣಗೆರೆಯಲ್ಲಿ ಪ್ರಚಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಬಾಗಲಕೋಟೆಯಲ್ಲಿ ಬೃಹತ್ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ್ದಾರೆ.

