ಬೆಂಗಳೂರು : ಇತ್ತೀಚೆಗೆ ‘BuzzBallz’ ಎಂಬ ತಂಪು ಪಾನೀಯದಲ್ಲಿ ವಿಷಕಾರಿ ಅಂಶಗಳಿವೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದಾರೆ.
ಜ್ಯೂಸ್ ಮಾದರಿಯ ‘BuzzBallz’ ತಂಪು ಪಾನೀಯದಲ್ಲಿ ವಿಷಕಾರಿ ಅಂಶ ಪತ್ತೆ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಲ್ಲಿ ಸ್ಯಾಂಪಲ್ ಸಂಗ್ರಹಿಸಲು ಸೂಚಿಸುತ್ತೇನೆ. ಗುಣಮಟ್ಟದ ಪರೀಕ್ಷೆಯ ವರದಿ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ತಪಾಸಣೆಗೆ ಆದೇಶ: ಈ ಪಾನೀಯದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳಿವೆಯೇ ಎಂಬ ಬಗ್ಗೆ ಪರೀಕ್ಷೆ ನಡೆಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಈ ಪಾನೀಯವು ಆಕರ್ಷಕ ಪ್ಯಾಕೇಜಿಂಗ್ ಹೊಂದಿರುವುದರಿಂದ ಮಕ್ಕಳು ಇದನ್ನು ಖರೀದಿಸುವ ಸಾಧ್ಯತೆ ಹೆಚ್ಚು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಬಗ್ಗೆ ಗಮನಹರಿಸಿ, ತನಿಖೆಗೆ ಪತ್ರ ಬರೆದಿತ್ತು. ಈ ಪಾನೀಯವು ಆಲ್ಕೋಹಾಲ್ ಅಂಶವನ್ನು ಹೊಂದಿದೆಯೇ ಅಥವಾ ಕೇವಲ ಸಾಫ್ಟ್ ಡ್ರಿಂಕ್ ಆಗಿದೆಯೇ? ಮತ್ತು ಇದಕ್ಕೆ ಅಗತ್ಯವಾದ ಪರವಾನಗಿಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

