ತಾಂತ್ರಿಕ ಪ್ರಪಂಚದ ಅತ್ಯಂತ ರೋಚಕ ಕಥೆಗಳಲ್ಲಿ ಇದು ಕೂಡ ಒಂದು ! ಕೇವಲ ತನ್ನ ಹೆಸರಿನ ಮೊದಲ ಅಕ್ಷರಗಳಿಗಾಗಿ (Arsyan Ismail) ಹತ್ತು ವರ್ಷದ ಹುಡುಗ ಮಾಡಿದ ಹೂಡಿಕೆ ಇಂದು ಕೋಟಿಗಳ ಒಡೆಯನನ್ನಾಗಿ ಮಾಡಿದೆ.
ಹೌದು. 1993ರಲ್ಲಿ ಇಂಟರ್ನೆಟ್ ಇನ್ನೂ ಜನಪ್ರಿಯವಾಗದ ಕಾಲದಲ್ಲಿ, ಕೇವಲ 100 ಡಾಲರ್ (ಅಂದಿನ ಮೌಲ್ಯ ಸುಮಾರು 300 ರೂ.) ನೀಡಿ ಈ ಡೊಮೇನ್ ಖರೀದಿಸಿದ್ದರು.ಅವರು ಇದನ್ನು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (Artificial Intelligence) ಗಾಗಿ ಖರೀದಿಸಿರಲಿಲ್ಲ, ಬದಲಿಗೆ ತಮ್ಮ ಹೆಸರಿನ ಅಕ್ಷರಗಳಿಗೆ ಸರಿಹೊಂದುತ್ತದೆ ಎಂದು ಖರೀದಿಸಿದ್ದರು. 2025ರಲ್ಲಿ ಈ ಡೊಮೇನ್ ಅನ್ನು 70 ಮಿಲಿಯನ್ ಡಾಲರ್ (ಸುಮಾರು 634 ಕೋಟಿ ರೂ.) ಗೆ ಮಾರಾಟ ಮಾಡಲಾಗಿದೆ.
ಯೆಸ್, ನಾವ್ ಹೇಳ್ತಿರೋದು ಮಲೇಷ್ಯಾದ ಟೆಕ್ ಉದ್ಯಮಿ ಅರ್ಸಿಯಾನ್ಇಸ್ಮಾಯಿಲ್ ಅವರ ಬಗ್ಗೆ. ಅರ್ಸಿಯಾನ್ಇಸ್ಮಾಯಿಲ್ (Arsyan Ismail) ಅವರು 1993ರಲ್ಲಿ ಕೇವಲ 100 ಡಾಲರ್ (ಸುಮಾರು 300 ರೂಪಾಯಿ) ನೀಡಿ ಖರೀದಿಸಿದ್ದ AI.com ಎಂಬ ಡೊಮೇನ್ ಹೆಸರನ್ನು, 2025ರಲ್ಲಿ ಬರೋಬ್ಬರಿ 70 ಮಿಲಿಯನ್ಡಾಲರ್(ಸುಮಾರು634 ಕೋಟಿರೂಪಾಯಿ) ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಇದನ್ನು ಇಂಟರ್ನೆಟ್ ಇತಿಹಾಸದ ಅತಿದೊಡ್ಡ ಡೀಲ್ ಎಂದು ಪರಿಗಣಿಸಲಾಗಿದೆ.
ಈ ಡೊಮೇನ್ ಅನ್ನು Crypto.com ಸಿಇಒ ಕ್ರಿಸ್ ಮಾರ್ಸ್ಜಲೆಕ್ (Kris Marszalek) ಖರೀದಿಸಿದ್ದಾರೆ. ವಿಶೇಷವೆಂದರೆ, ಅರ್ಸಿಯಾನ್ ಈ ಡೊಮೇನ್ ಖರೀದಿಸಿದಾಗ ಅವರ ವಯಸ್ಸು ಕೇವಲ 10 ವರ್ಷ!
ಡೊಮೇನ್ ಖರೀದಿಸಲು ಕಾರಣವೇನು?
ವರದಿಗಳ ಪ್ರಕಾರ, ಅರ್ಸಿಯಾನ್ ಇಸ್ಮಾಯಿಲ್ ಅವರು ಈ ಡೊಮೇನ್ ಅನ್ನು ಕೃತಕ ಬುದ್ಧಿಮತ್ತೆ (Artificial Intelligence) ಎಂಬ ಕಾರಣಕ್ಕಾಗಿ ಖರೀದಿಸಿರಲಿಲ್ಲ. ಬದಲಿಗೆ, ಅವರ ಹೆಸರಿನ ಮೊದಲ ಅಕ್ಷರಗಳಾದ Arsyan Ismail ಎಂಬುದಕ್ಕೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಖರೀದಿಸಿದ್ದರು. ಅಂದು ಕೇವಲ ಹೆಸರಿನ ಸಂಕ್ಷಿಪ್ತ ರೂಪವಾಗಿದ್ದ ‘AI’, ಇಂದು ಜಾಗತಿಕ ತಂತ್ರಜ್ಞಾನ ಲೋಕವನ್ನೇ ಆಳುತ್ತಿರುವುದು ಅರ್ಸಿಯಾನ್ ಅವರ ಪಾಲಿಗೆ ಲಕ್ಕಿ ಬೋನಸ್ ಆಗಿದೆ.
ಇತಿಹಾಸದಲ್ಲೇ ಅತ್ಯಂತ ದುಬಾರಿ ಡೀಲ್
- ವಹಿವಾಟು: ಏಪ್ರಿಲ್ 2025 ರಲ್ಲಿ ಈ ಡೀಲ್ ನಡೆದಿದ್ದು, ಇದರ ಪಾವತಿಯನ್ನು ಸಂಪೂರ್ಣವಾಗಿ ಕ್ರಿಪ್ಟೋಕರೆನ್ಸಿ ಮೂಲಕ ಮಾಡಲಾಗಿದೆ.
- ದಾಖಲೆ: ಇದು 2010 ರಲ್ಲಿ 49.7 ಮಿಲಿಯನ್ ಡಾಲರ್‌ಗೆ ಮಾರಾಟವಾಗಿದ್ದ CarInsurance.com ದಾಖಲೆಯನ್ನು ಮುರಿದಿದೆ.
- ಸೂಪರ್ ಬೌಲ್ ಪ್ರದರ್ಶನ: ಸೂಪರ್ ಬೌಲ್ LX ವೇಳೆ ನಡೆದ ಜಾಹೀರಾತಿನಲ್ಲಿ ಈ ಡೊಮೇನ್ ಕಾಣಿಸಿಕೊಂಡಾಗ ಜಗತ್ತಿನ ಗಮನ ಸೆಳೆಯಿತು. Crypto.com ಈಗ ಈ ಡೊಮೇನ್ ಅನ್ನು ತನ್ನ ಹೊಸ “ಪರ್ಸನಲ್ AI ಏಜೆಂಟ್” ಪ್ಲಾಟ್‌ಫಾರ್ಮ್‌ಗಾಗಿ ಬಳಸುತ್ತಿದೆ.
ವರದಿಗಳ ಪ್ರಕಾರ, ಈ ಡೊಮೇನ್‌ಗೆ ಸುಮಾರು 100 ಮಿಲಿಯನ್ ಡಾಲರ್‌ವರೆಗೂ ಆಫರ್‌ಗಳು ಬಂದಿದ್ದವು. ಆದರೆ ಅಂತಿಮವಾಗಿ ಅವರು 70 ಮಿಲಿಯನ್ ಡಾಲರ್‌ಗೆ ಒಪ್ಪಂದ ಮಾಡಿಕೊಂಡರು. ಈ ಕುರಿತು ಮಾತನಾಡಿದ ಅರ್ಸಿಯಾನ್, “ಒಬ್ಬ ಬಿಲಿಯನೇರ್ ಜೊತೆ ಅತಿಯಾಗಿ ಚೌಕಾಸಿ ಮಾಡಬೇಡಿ” ಎಂದು ಇತರರಿಗೆ ಸಲಹೆ ನೀಡಿದ್ದಾರೆ.

