ಬೆಂಗಳೂರು: ಟೋಲ್ ಭೂತ್ ಗೆ ಬಸ್ ಗುದ್ದಿ ಭೀಕರ ಅಪಘಾತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಯ ನೆಪದಲ್ಲಿ ಬಂದ ಖದೀಮರು ಮೊಬೈಲ್ ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದೆ. ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ವೇಗವಾಗಿ ಬಂದು ಟೋಲ್ ಪ್ಲಾಜಾ ಬೂತ್ ಗೆ ಡಿಕ್ಕಿ ಹೊಡೆದಿದೆ. ಬಸ್ ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟೋಲ್ ಪ್ಲಾಜಾ ಧ್ವಂಸಗೊಂಡಿದೆ. ಈ ವೇಳೆ ರಕ್ಷಣಾ ಕಾರ್ಯಕ್ಕೆಂದು ಬಂದ ಕಳ್ಳರ ಗುಂಪು ಬಸ್ ನಲ್ಲಿದ್ದ ಪ್ರಯಾಣಿಕರ ಮೊಬೈಲ್ ಗಳನ್ನು ಹೊತ್ತೊಯ್ದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವುದಾಗಿ ಹೇಳಿ ಬಸ್ ಹತ್ತಿದ್ದ ಕಳ್ಳರು, ಮೂವರು ಪ್ರಯಾಣಿಕರ ಐಫೋನ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರಯಾಣಿಕರನ್ನು ಎಕ್ಸಿಟ್ ಡೋರ್ ಮೂಲಕ ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲ್ ಘಟನೆ ನಡೆದಿದೆ.

