ತಿರುವನಂತಪುರಂ: ಉತ್ತರ ಪ್ರದೇಶದ ರೀತಿ ಕರ್ನಾಟಕದಲ್ಲಿಯೂ ಬುಲ್ಡೋಜರ್ ನ್ಯಾಯ ಅನುಸರಿಸಲಾಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ ಬಳಿ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ 200 ಕ್ಕೂ ಹೆಚ್ಚು ಮನೆಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಧ್ವಂಸಗೊಳಿಸಿದೆ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಿಂದೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದ್ದ ರಾಜಕೀಯ ದಾಳಿ ದಕ್ಷಿಣಕ್ಕೂ ಹರಡುತ್ತಿದೆ ಎಂಬುದನ್ನು ಈ ಘಟನೆ ಬಿಂಬಿಸುತ್ತದೆ. ತೀವ್ರ ಚಳಿ ನಡುವೆ ಇಡೀ ಕುಟುಂಬಗಳನ್ನು ತಮ್ಮ ಮನೆಗಳಿಂದ ಬೀದಿಗೆ ತಳ್ಳಲಾಗಿದೆ. ಅಲ್ಲಿನ ನಿವಾಸಿಗಳಿಗೆ ಅಲ್ಲಿಂದ ಹೋಗುವುದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ವಿಚಾರದಲ್ಲಿ ಬುಲ್ಡೋಜರ್ ನ್ಯಾಯ ಅನುಸರಿಸಿದೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುತ್ತೇನೆ ಎಂದು ಹೇಳುವ ಪಕ್ಷ ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿದ ಪಿಣರಾಯಿ ವಿಜಯನ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ.
ಯಲಹಂಕದ ಕೋಗಿಲು ಲೇಔಟ್ ಬಳಿ ಫಕೀರ್ ಕಾಲೋನಿ, ವಾಸಿಮ್ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ 200ಕ್ಕೂ ಅಧಿಕ ಮನೆಗಳನ್ನು ಸರ್ಕಾರ ತೆರವುಗೊಳಿಸಿದೆ. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುರುತಿಸಿದ್ದ ಭೂಮಿಯನ್ನು ಅತಿಕ್ರಮಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದನ್ನು ಪಿಣರಾಯಿ ವಿಜಯನ್ ಬುಲ್ಡೋಜರ್ ನ್ಯಾಯ ಎಂದು ಟೀಕಿಸಿದ್ದಾರೆ.
ಸಂಘ ಪರಿವಾರದ ಅಲ್ಪಸಂಖ್ಯಾತ ವಿರೋಧಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಭಯ ಮತ್ತು ಕ್ರೂರ ಬಲದ ಮೂಲಕ ಆಡಳಿತ ನಡೆಸುವಾಗ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಘನತೆಯು ಮೊದಲ ಬಲಿಪಶುಗಳಾಗುತ್ತವೆ. ಈ ಕಪಟ ಪ್ರವೃತ್ತಿಯನ್ನು ವಿರೋಧಿಸಲು ಮತ್ತು ಸೋಲಿಸಲು ಎಲ್ಲಾ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಟ್ಟಾಗಿ ಒಟ್ಟುಗೂಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

