ಕಲಬುರಗಿ: ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವಾಗ ಯುವಕ ಕೊಚ್ಚಿ ಹೋದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ನಡೆದಿದೆ.
ಖಜೂರಿ ಗ್ರಾಮದ ಲಕ್ಷ್ಮಿಕಾಂತ ನದಿಯಲ್ಲಿ ಕೊಚ್ಚಿ ಹೋದ ಯುವಕ ಎಂದು ಹೇಳಲಾಗಿದೆ. ಗಾಣಗಾಪುರದ ದತ್ತಾತ್ರೇಯ ಸ್ವಾಮಿ ದರ್ಶನಕ್ಕೆ ಕುಟುಂಬದವರೊಂದಿಗೆ ಲಕ್ಷ್ಮಿಕಾಂತ ಬಂದಿದ್ದರು.
ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ನಾಲ್ವರು ಇಳಿದಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಒಂದೇ ಕುಟುಂಬದ ನಾಲ್ವರ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

