HomeKarnatakaBREAKING : ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯ : ಸಿಎಂ ಸಿದ್ದರಾಮಯ್ಯ

BREAKING : ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯವಾದುದು ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದುದು. ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅತ್ಯಂತ ಬಿಗಿಭದ್ರತೆಯ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ, ಬಹಳ ಪ್ರಮುಖವಾಗಿ ದೇಶದ ಗೃಹ ಸಚಿವ ಅಮಿತ್ ಶಾ  ಅವರ ಕರ್ತವ್ಯವಾಗಿದೆ.

ಇಪ್ಪತ್ತೆರಡು ವರ್ಷಗಳ ಹಿಂದೆ (13-12-2001) ಸಂಸತ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯವೂ ಮೂಡುತ್ತಿದೆ. 2001ರ ದಾಳಿಯ ಸಮಯದಲ್ಲಿಯೂ ಬಿಜೆಪಿ  ನೇತೃತ್ವದ ಎನ್.ಡಿ.ಎ ಸರ್ಕಾರವೇ ಇತ್ತು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ  ಅವರೇ ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಪಾಸ್ ನೀಡಿರಬೇಕಾಗಿದ್ದರೆ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೆ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ದೇಶದ ಹೃದಯದಂತಿರುವ ಸಂಸತ್ ಭವನಕ್ಕೆ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿ ಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬು ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು? ಈ ಕೃತ್ಯದಲ್ಲಿ ಒಳಗಿನವರೇ ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ಮೋದಿ ಅವರದ್ದಾಗಿದೆ ಎಂದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular