ದಾವಣಗೆರೆ: ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುವುದು ಸುಳ್ಳು. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಡುತ್ತೇನೆ ಎಂದು ನಾನು ಮುಖ್ಯಮಂತ್ರಿ ಬಳಿಗೆ ಹೋಗಿದ್ದೆ ಎನ್ನುವುದು ಸುಳ್ಳು. ರಾಜೀನಾಮೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವು ಸಚಿವರು, ಶಾಸಕರು ಕುಟುಂಬದ ಜೊತೆ ವಿದೇಶಕ್ಕೆ ಹೋಗುತ್ತಿದ್ದಾರೆ. ಸಚಿವರು, ಶಾಸಕರು ಮನುಷ್ಯರಲ್ಲವೇ? ಅದು ಅವರ ಖಾಸಗಿ ವಿಚಾರ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಗಾಗಿ ಸಭೆ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಗಾಗಿ ಒಂದು ಬಣ ಸಭೆ ನಡೆಸಿದ ವಿಚಾರದ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಗರಂ ಆಗಿದ್ದು, ಆ ರೀತಿ ಸಭೆ ನಡೆಸಲು ನಮಗೂ ಬರುತ್ತದೆ ಎಂದಿದ್ದಾರೆ. ಪುತ್ರ ಸಮರ್ಥ್ ಶಾಮನೂರು ಅಭ್ಯರ್ಥಿಯಾಗುವ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ.

