ಬಾಗಲಕೋಟೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಸಂಘಟನೆ ಸಾಧ್ಯವಿಲ್ಲ ಎಂದು ಬಹಿರಂಗ ಸಭೆಯಲ್ಲೇ ಯತ್ನಾಳ್ ಪರವಾಗಿ ಬಿಜೆಪಿ ನಾಯಕ ಬ್ಯಾಟಿಂಗ್ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ್ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮರಕಟ್ಟಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪಾಧ್ಯಕ್ಷನಾಗಿ ನನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಬೆಂಗಳೂರಿನಲ್ಲಿ ನಡೆದ ಪಕ್ಷದ ಅವಲೋಕನ ಸಭೆಯಲ್ಲಿಯೂ ಹೇಳಿದ್ದೇನೆ. ನೀವು ಬಸವನಗೌಡ ಪಾಟೀಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟಲು ಆಗುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿ ಬಂದಿದ್ದೇನೆ ಎಂದರು.
ಸಂಬಂಧ ಪಟ್ಟ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಪತ್ರ ಬರೆದಿದ್ದೇನೆ. ಪತ್ರದಲ್ಲಿ ಏನೇನು ಬರೆದಿದ್ದೇನೆ ಎನ್ನುವುದನ್ನು ವೇದಿಕೆಯಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಯತ್ನಾಳ್ ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷಿಸುತ್ತೇನೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರಂತಹವರು ನಮ್ಮ ಬೆನ್ನಿಗೆ ಇದ್ದರೆ ನಾವು ಯಾವುದೇ ಕಾರ್ಯಕ್ರಮವನ್ನು ಸುಲಭವಾಗಿ ಮಾಡಬಹುದು ಎಂದು ಹೇಳಿದ್ದಾರೆ.
