ಬೆಂಗಳೂರು: ಕರ್ನಾಟಕ ಭ್ರಷ್ಟಾಚಾರ ಮುಕ್ತವಾಗಬೇಕು. ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡುವಂತಿಲ್ಲ. ಭ್ರಷ್ಟಾಚಾರ ಮುಕ್ತ ಸರ್ಕಾರ ನಮ್ಮದಾಗಬೇಕು ಎಂಬ ಆಶಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಾತನಾಡಿದ ಸಿಎಂ, ಕರ್ನಾಟಕದಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ಆಸ್ಪದ ನೀಡುವುದಿಲ್ಲ. ನಾನೇ ತಪ್ಪು ಮಾಹಿತಿ ನೀಡಿದರೂ ಅದನ್ನು ಮಾಡಬೇಡಿ ಎಂದು ಹೇಳಿದ್ದೇನೆ. ಅಧಿಕಾರಿಗಳ ಮೇಲೆ ಸಚಿವರು ಶಾಸಕರು ಒತ್ತಡ ಹೇರಬಾರದು ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ನಾಮಫಲಕ ಅಳವಡಿಸಲಾಗುವುದು. ನಾಮಫಲಕದಲ್ಲಿ ಓರ್ವ ಹಿರಿಯ ಅಧಿಕಾರಿಯ ನಂಬರ್ ನಮೂದಿಸಲಾಗುವುದು. ಸಿಬ್ಬಂದಿ ಯಾರೇ ಲಂಚ ಕೇಳಿದರೂ ಆ ಸಂಖ್ಯೆಯನ್ನು ಸಂಪರ್ಕಿಸಬೇಕು. ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಶೂನ್ಯಕ್ಕೆ ಇಳಿಸಲು ನಿರ್ಧರಿಸಿದ್ದೇವೆ. ಒಂದೇ ಸಲ ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದಿಲ್ಲ, ಪ್ರಯತ್ನಿಸೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

